ADVERTISEMENT

ಜನನ, ಮರಣ ಪ್ರಮಾಣಪತ್ರ ‘ದುಬಾರಿ’!

ಶುಲ್ಕವನ್ನು ಒಮ್ಮೆಲೇ 10 ಪಟ್ಟು ಹೆಚ್ಚಿಸಿದ ಸರ್ಕಾರ; ಜನರಿಗೆ ತೊಂದರೆ

ಎಂ.ಮಹೇಶ
Published 15 ಫೆಬ್ರುವರಿ 2025, 4:42 IST
Last Updated 15 ಫೆಬ್ರುವರಿ 2025, 4:42 IST
ಮರಣ ಪ್ರಮಾಣಪತ್ರ (ಸಾಂಕೇತಿಕ ಚಿತ್ರ)
ಮರಣ ಪ್ರಮಾಣಪತ್ರ (ಸಾಂಕೇತಿಕ ಚಿತ್ರ)   

ಮೈಸೂರು: ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ಸರ್ಕಾರ ಒಮ್ಮೆಲೇ ಬರೋಬ್ಬರಿ ಹತ್ತು ಪಟ್ಟು ಏರಿಸಿದೆ. ₹ 5ರಿಂದ ₹ 50ಕ್ಕೆ ಹೆಚ್ಚಿಸಿರುವುದು ಜನಸಾಮಾನ್ಯರಿಗೆ ‘ದುಬಾರಿ’ಯಾಗಿ ಪರಿಣಮಿಸಿದೆ.

‘ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು (ತಿದ್ದುಪಡಿ) 2024ರಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಈಚೆಗೆ ಶುಲ್ಕವನ್ನು ಏರಿಸಲಾಗಿದೆ.

ಸಾರ್ವಜನಿಕರಿಗೆ ಜನನ ಹಾಗೂ ಮರಣ ಪ್ರಮಾಣಪತ್ರಗಳು ಹಲವು ಉದ್ದೇಶಕ್ಕೆ ಬೇಕಾಗುತ್ತವೆ. ಮಕ್ಕಳ ಜನನ ಪ್ರಮಾಣಪತ್ರವನ್ನು ಪೋಷಕರು ಶಾಲೆಗಳ ಪ್ರವೇಶ, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಲ್ಲಿಸಲೇಬೇಕು. ಮರಣ ಹೊಂದಿದಾಗ ವ್ಯಕ್ತಿಯ ಕುಟುಂಬದವರು ಪ್ರಮಾಣಪತ್ರವನ್ನು ವಿವಿಧ ಉದ್ದೇಶಕ್ಕಾಗಿ ಪಡೆದುಕೊಳ್ಳಬೇಕಾಗುತ್ತದೆ.

ADVERTISEMENT

‘ಇಂತಹ ದಾಖಲೆಗಳ ಮಹತ್ವವನ್ನು ಮನಗಂಡ ಸರ್ಕಾರ ಜನರ ಮೇಲೆ ‘ಬರೆ’ ಎಳೆದಿದೆ. ಈ ಅವೈಜ್ಞಾನಿಕವಾದ ದರ ಪರಿಷ್ಕರಣೆಯನ್ನು ಮರುಪರಿಶೀಲಿಸಲು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯು ಕ್ರಮ ಕೈಗೊಳ್ಳಬೇಕು’ ಎಂಬ ಒತ್ತಾಯ ಕೇಳಿಬಂದಿದೆ.

ಸರ್ಕಾರಕ್ಕೆ ಲಾಭ:

ಶುಲ್ಕ ಪರಿಷ್ಕರಣೆಯಿಂದ ಸರ್ಕಾರಕ್ಕೆ ಲಾಭ‌ವಾಗುತ್ತಿದೆ. ಅಗತ್ಯವಿರುವವರು, ಹಲವು ಕಡೆ ಸಲ್ಲಿಸಬೇಕಾದ್ದರಿಂದ ಪ್ರಮಾಣಪತ್ರಗಳನ್ನು ಒಮ್ಮೆಲೆ ಸರಾಸರಿ 8ರಿಂದ 10 ಪ್ರತಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಹಿಂದೆ 5 ಪ್ರತಿಗಳನ್ನು ಪಡೆದುಕೊಂಡರೆ ₹ 25 ಆಗುತ್ತಿತ್ತು. 10 ಪ್ರತಿಗಳನ್ನು ತೆಗೆದುಕೊಂಡರೆ ₹50 ಆಗುತ್ತಿತ್ತು. ಈಗ, 5ಕ್ಕೆ ₹ 250 ಹಾಗೂ 10ಕ್ಕೆ ₹ 500 ತೆರಬೇಕಾಗಿದೆ.

ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗದಿರುವ ಜನನ ಅಥವಾ ಮರಣದ ಕುರಿತು ನ್ಯಾಯಾಲಯದ ಅದೇಶದ ಮೂಲಕ ಪಡೆಯಲಾಗುವ ‘ಅಲಭ್ಯ ಪ್ರಮಾಣಪತ್ರ’ದ ಶುಲ್ಕ ಹಿಂದೆ ಒಂದು ವರ್ಷಕ್ಕೆ ₹ 2  ಇತ್ತು. ಈಗ ₹ 20ಕ್ಕೆ ಹೆಚ್ಚಿಸಲಾಗಿದೆ.

‘ಶುಲ್ಕ ಹೆಚ್ಚಳ ಸಾರ್ವಜನಿಕರಿಗೆ ಹೊರೆಯಾಗಿರುವುದು ನಿಜ. ಈ ಬಗ್ಗೆ ದಿನವೂ ತಕರಾರು ತೆಗೆಯುತ್ತಿದ್ದಾರೆ. ಅದರಿಂದ ನಮಗೂ ತೊಂದರೆಯಾಗುತ್ತಿದೆ. ಆದರೆ, ನಾವು ಸರ್ಕಾರದ ನಿಯಮವನ್ನು ಪಾಲಿಸಬೇಕು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಕೇಳಿದರು.

‘ಸಣ್ಣಪುಟ್ಟ ತಿದ್ದುಪಡಿ ಮಾಡಿಸಿದರೂ ಒಂದು ಪ್ರತಿಯನ್ನು ಜನರೇಟ್ ಮಾಡಿ ಪ್ರಿಂಟ್ ಮಾಡಲೇಬೇಕು. ಒಂದು ಪ್ರತಿಗೆ ಈಗ ಅರ್ಜಿದಾರರು ₹50 ಕೊಡಲೇಬೇಕು. ಪ್ರತಿ ಹೆಚ್ಚಾದಷ್ಟು ಶುಲ್ಕ ಜಾಸ್ತಿ ಕೊಡಲೇಬೇಕು’ ಎನ್ನುತ್ತಾರೆ ಅವರು.

ಮೈಸೂರು ಮಹಾನಗರಪಾಲಿಕೆಯೊಂದರಲ್ಲೇ ನಿತ್ಯ ಸರಾಸರಿ ಜನನ, ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ 200 ಅರ್ಜಿಗಳು ಸಲ್ಲಿಕೆಯಾಗುತ್ತಿವೆ. 500ಕ್ಕೂ ಹೆಚ್ಚಿನ ಪ್ರತಿಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ.

ಪ್ರತಿ ಪ್ರಮಾಣಪತ್ರಕ್ಕೆ ₹ 5 ದರವಿತ್ತು 5 ಬೇಕಿದ್ದರೆ ₹ 250 ತೆರಬೇಕಾದ ಸ್ಥಿತಿ
ಸಾರ್ವಜನಿಕರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದು ಸರ್ಕಾರವು ಜನನ ಮರಣ ಪ್ರಮಾಣಪತ್ರದ ಶುಲ್ಕವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿರುವುದು ಸರಿಯಲ್ಲ. ಇದನ್ನು ಮರುಪರಿಶೀಲಿಸಬೇಕು
ವಿಕ್ರಂ ಅಯ್ಯಂಗಾರ್ ಪ್ರಧಾನ ಕಾರ್ಯದರ್ಶಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.