
ಮೈಸೂರಿನ ನೇರಂಬಳ್ಳಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮುಖಂಡರು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು
– ಪ್ರಜಾವಾಣಿ ಚಿತ್ರ
ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಬಿಜೆಪಿಗೆ ಉತ್ತಮ ಹೆಸರಿದ್ದು, ಅದಕ್ಕೆ ಸಂಘಟನೆಯನ್ನು ಇನ್ನಷ್ಟು ವಿಸ್ತರಿಸಿದರೆ ಮತ್ತಷ್ಟು ಬಲ ಬರುತ್ತದೆ. ಅದು ಮುಂದಿನ ಚುನಾವಣೆಗಳಲ್ಲಿ ಮತವಾಗಿ ಪರಿವರ್ತನೆಯಾದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಲ್ಲಿನ ಲಕ್ಷ್ಮೀಪುರಂನ ನೇರಂಬಳ್ಳಿ ಸಾವಿತ್ರಮ್ಮ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಪಕ್ಷದ ಮೈಸೂರು ಗ್ರಾಮಾಂತರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪಕ್ಷದಲ್ಲಿ ಯುವಕರು, ಹಿರಿಯರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಸಂಘಟನೆಗೆ ಗಮನಹರಿಸಬೇಕು. ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಪಕ್ಷದ ಪ್ರಾಬಲ್ಯವಿದ್ದು, ನಾವು ಅದನ್ನು ಮತ್ತಷ್ಟು ಸಂಘಟಿತವಾಗಿ ಬಲಪಡಿಸಬೇಕು’ ಎಂದರು.
ಕಾಂಗ್ರೆಸ್ ವಿರುದ್ಧ ಟೀಕೆ:
‘ಕಾಂಗ್ರೆಸ್‌ಗೆ ದೇಶದ ಹಿತಕ್ಕಿಂತ ಸ್ವಂತ ಲಾಭದ್ದೇ ಚಿಂತೆಯಾಗಿದೆ. ದೇಶದ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಬದಲಾವಣೆಗಳನ್ನು ಕಾಂಗ್ರೆಸ್‌ನವರು ಸಹಿಸುತ್ತಿಲ್ಲ’ ಎಂದು ಟೀಕಿಸಿದರು. ‘ವಿಕಸಿತ ಭಾರತ ನಿರ್ಮಾಣದ ಪ್ರಯತ್ನಕ್ಕೆ ನಾವು ಕೈಜೋಡಿಸಬೇಕು’ ಎಂದು ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ‘ಬಿಜೆಪಿಯು ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಒಂದು ದಿಕ್ಕನ್ನು ತೋರಿಸಿಕೊಟ್ಟಿದೆ. ಜಗತ್ತಿನಲ್ಲಿ ದೊಡ್ಡ ಬಲಿಷ್ಠ ಪಕ್ಷವಾಗಿ ಹೊರ ಹೊಮ್ಮಿದೆ’ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮಾತನಾಡಿ, ‘ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬುಡಸಮೇತ ಕಿತ್ತೆಸೆಯಲು ಜನ ಸಜ್ಜಾಗಿದ್ದಾರೆ’ ಎಂದು ಹೇಳಿದರು.
ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಪಕ್ಷದ ರಾಜ್ಯ ಘಟಕದ ಪ್ರಕೋಷ್ಟಗಳ ಸಹ ಸಂಯೋಜಕ ಎನ್.ವಿ. ಫಣೀಶ್, ಮುಖಂಡರಾದ ಎಸ್.ಸಿ.ಬಸವರಾಜು, ಎಂ.ಅಪ್ಪಣ್ಣ, ಎಸ್.ಮಹದೇವಯ್ಯ, ಎನ್.ಆರ್.ಕೃಷ್ಣಪ್ಪಗೌಡ, ಬಿ.ಎನ್.ಸದಾನಂದ, ಎಸ್.ಸಿ.ಅಶೋಕ್, ಶಿವಕುವಾರ್, ಸಹಪ್ರಭಾರಿ ಎನ್.ವಿ.ಫಣೀಶ್, ಅರುಣ್‌ಕುಮಾರ್, ಮಂಗಳಾ ಸೋಮಶೇಖರ್ ನಾಗರಾಜ ಮಲ್ಲಾಡಿ, ಹುಣಸೂರು ಸೋಮಶೇಖರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.