ಮೈಸೂರು: ‘ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಬದುಕನ್ನು ಬರ್ಬಾದ್ ಮಾಡಿ ಸಾಧನಾ ಸಮಾವೇಶ ಮಾಡುತ್ತಿದೆ. ಯಾವ ಪುರುಷಾರ್ಥಕ್ಕೆ ಈ ಕಾರ್ಯಕ್ರಮ ಎಂಬುದನ್ನು ತಿಳಿಸಲಿ’ ಎಂದು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಸೋಮವಾರ ರಾಜ್ಯ ಸರ್ಕಾರದ 2 ವರ್ಷ ಅವಧಿಯ ಚಾರ್ಜ್‌ಶೀಟ್ ಬಿಡುಗಡೆ ಮಾಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ್ದರೂ ಸಾಧನೆ ಮಾತ್ರ ಶೂನ್ಯ. ಸರ್ಕಾರದ 35 ಸಚಿವರು ಮಾತ್ರ ಸಂತೋಷದಿಂದ ಇದ್ದಾರೆ. ವಸೂಲಿ, ಶೇ 60ರಿಂದ 100ರವರೆಗೂ ಕಮಿಷನ್, ರೈತ– ದಲಿತ ವಿರೋಧಿ ನೀತಿಗಳ ಅನುಕರಣೆ, ಬೆಲೆ ಏರಿಕೆ, ಮುಡಾ ನಿವೇಶನ ಕಬಳಿಕೆ, ಕೆಪಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಕಾರ್ಯಗಳೇ ಇವರ ಸಾಧನೆ’ ಎಂದು ಲೇವಡಿ ಮಾಡಿದರು.
‘ಮುಖ್ಯಮಂತ್ರಿಯಾಗಿ ಮೈಸೂರು ಜಿಲ್ಲೆಗೆ ಸಿದ್ದರಾಮಯ್ಯರ ಕೊಡುಗೆ ಶೂನ್ಯ. ಕೈಗಾರಿಕೆಗಳು ಇಲ್ಲಿಂದ ಕಾಲು ಕೀಳುತ್ತಿವೆ. ಗಲಭೆಕೋರರ ಹಾವಳಿ ಹೆಚ್ಚಾಗಿದೆ. ಅಂತಹವರಿಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದ್ದು, ಕಾನೂನು ಸುವ್ಯವಸ್ಥೆ ಕುಸಿದಿದೆ’ ಎಂದು ದೂರಿದರು.
‘ಆರೋಗ್ಯ ಸಚಿವರು ಇಲಾಖೆ ಕೆಲಸ ಬಿಟ್ಟು ಬೇರೆಲ್ಲ ಮಾತನಾಡುತ್ತಿದ್ದಾರೆ. ಬಾಣಂತಿಯರಿಗೆ ವಿಷ ಕೊಟ್ಟ ಕೊಲೆಗಡುಕ ಸರ್ಕಾರವಿದು. ಬಾಣಂತಿಯರ ಸರಣಿ ಸಾವಿನ ತನಿಖಾ ವರದಿ ಬಂದಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಟೀಕಿಸಿದರು.
ರಾಜ್ಯದ ಕಾರ್ಮಿಕ ಸಚಿವರು ಕಾರ್ಮಿಕರಿಗಿಂತ ದೇಶದ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಅವರು ಆಗಾಗ್ಗೆ ಕೈಯಲ್ಲಿ ಹಿಡಿಯುವುದು ಸಂವಿಧಾನವೋ ಬೈಬಲ್ ಗ್ರಂಥವೋ ಗೊತ್ತಿಲ್ಲ.ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ಶಾಸಕ
‘ಸರ್ಕಾರಕ್ಕೆ ಆತ್ಮಸಾಕ್ಷಿ ಇದ್ದಿದ್ದರೆ ಈ ಸಮಾವೇಶ ಮಾಡುತ್ತಿರಲಿಲ್ಲ. ರಾಜ್ಯದ ಸಾಲವನ್ನು ₹7 ಲಕ್ಷ ಕೋಟಿಗೆ ಏರಿಸಿದ್ದೇ ಇವರ ಸಾಧನೆ. ಸರ್ಕಾರದ ವಿರುದ್ಧ ಜನಜಾಗೃತಿ ಸಮಾವೇಶ ನಡೆಸಲಾಗುವುದು’ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಮೇಯರ್ ಶಿವಕುಮಾರ್, ಪಕ್ಷದ ಮುಖಂಡರಾದ ಜೋಗಿ ಮಂಜುನಾಥ್, ಎಚ್. ಜಿ. ಗಿರಿಧರ್, ಕೇಬಲ್ ಮಹೇಶ್, ಬಾಲಕೃಷ್ಣ, ರಾಕೇಶ್, ಡಾ .ಸುಶ್ರುತ್ ಗೌಡ, ಮಹೇಶ್ ರಾಜೇ ಅರಸ್, ದಯಾನಂದ ಪಟೇಲ್ ಇದ್ದರು.
‘ಒಳಜಗಳವಿಲ್ಲ; ನಾವೆಲ್ಲ ಒಂದು’
‘ಬಿಜೆಪಿಯಲ್ಲಿ ಯಾವುದೇ ಒಳಜಗಳ ಇಲ್ಲ. ಪಕ್ಷಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಶಿಸ್ತು ಉಲ್ಲಂಘಿಸಿದವರ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿದ್ದು ಉಳಿದವರಿಗೂ ಈಗಾಗಲೇ ನೋಟಿಸ್ ನೀಡಲಾಗಿದೆ’ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ‘ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಕೆಲಸ ಮಾಡುತ್ತಿದೆ. ದಿನ ಸರ್ಕಾರದ ಒಂದಲ್ಲೊಂದು ಹಗರಣವನ್ನು ಬಯಲಿಗೆ ಎಳೆಯುತ್ತಿದ್ದೇವೆ. ಹೊಂದಾಣಿಕೆ ರಾಜಕಾರಣದ ಪ್ರಶ್ನೆಯೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ಟ್ರಂಪ್ ಮಾತು ಕೇಳಿ ಭಾರತ ಯುದ್ಧ ನಿಲ್ಲಿಸಿಲ್ಲ. ನಮ್ಮ ಹಿತಾಸಕ್ತಿ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.