
ತಿ.ನರಸೀಪುರ: ರಾಜ್ಯ ಸರ್ಕಾರ ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯನ್ನು ಅಂಗೀಕರಿಸಿ ಜಾರಿಗೊಳಿಸುವುದನ್ನು ವಿರೋಧಿಸಿ ವರುಣ ಹಾಗೂ ತಿ.ನರಸೀಪುರ ಕ್ಷೇತ್ರಗಳ ಬಿಜೆಪಿ ಮುಖಂಡರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಧರಣಿ ನಡೆಸಿದ ಪ್ರತಿಭಟನಕಾರರು, ‘ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ ಭಾರತದ ಸಂವಿಧಾನಕ್ಕೆ ವಿರುದ್ಧವಿದೆ, ಇದನ್ನು ಜಾರಿಗೊಳಿಸಬಾರದು’ ಎಂದು ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ವಕ್ತಾರ ದಯಾನಂದ ಪಟೇಲ್ ಮಾತನಾಡಿ, ‘ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ಇದು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿದೆ’ ಎಂದರು.
ಬಳಿಕ ತಿ.ನರಸೀಪುರ ಹಾಗೂ ವರುಣ ಮಂಡಲ ಅಧ್ಯಕ್ಷರಾದ ಮಹದೇವಸ್ವಾಮಿ, ಸತ್ಯರಾಜು ಅವರ ನೇತೃತ್ವದ ನಿಯೋಗವು ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಅರ್ಜುನ್ ರಮೇಶ್, ಕರೋಹಟ್ಟಿ ಮಹದೇವಯ್ಯ, ಜಿಲ್ಲಾ ಕಾರ್ಯದರ್ಶಿಗಳಾದ ದಯಾನಂದ ಪಟೇಲ್, ಸಿ.ಎಂ. ಮಾದೇವಯ್ಯ, ಡಾ.ರೇವಣ್ಣ, ಡಾ.ಮಲ್ಲಿಕಾರ್ಜುನಸ್ವಾಮಿ, ಪುರಸಭಾ ಸದಸ್ಯ ಕಿರಣ್, ಟೌನ್ ಅಧ್ಯಕ್ಷ ಕೆ. ನಂಜುಂಡಸ್ವಾಮಿ, ಎನ್. ಲೋಕೇಶ್, ಸಿದ್ದಲಿಂಗಸ್ವಾಮಿ, ರಾಜಶೇಖರ್, ವೆಂಕಟರಮಣ ಶೆಟ್ಟಿ, ಸೋಮಶೇಖರ್, ಬಿನಕನಹಳ್ಳಿ ವಿಜಯ್ ಕುಮಾರ್, ಮಹದೇವಸ್ವಾಮಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.