ADVERTISEMENT

ಜೀತ ವಿಮುಕ್ತಿ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶ: ₹500 ಕೋಟಿ ಪ್ಯಾಕೇಜ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 23:25 IST
Last Updated 10 ಆಗಸ್ಟ್ 2025, 23:25 IST
<div class="paragraphs"><p>ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಜೀವವಿಮುಕ್ತಿ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಭಿಕರು ಪಾಲ್ಗೊಂಡಿದ್ದರು</p></div>

ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಜೀವವಿಮುಕ್ತಿ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಭಿಕರು ಪಾಲ್ಗೊಂಡಿದ್ದರು

   

  –ಪ್ರಜಾವಾಣಿ ಚಿತ್ರ

ಮೈಸೂರು: ‘ಜೀತ ಪದ್ಧತಿಯಿಂದ ಬಿಡುಗಡೆ ಆಗಿರುವ ಕಾರ್ಮಿಕರ ಕಲ್ಯಾಣಕ್ಕೆ ₹500 ಕೋಟಿ ಮೊತ್ತದ ಸಮಗ್ರ ಪ್ಯಾಕೇಜ್‌ ಘೋಷಿಸಬೇಕು. ಕಾರ್ಮಿಕ ವಿರೋಧಿ ಎಸ್‌ಒಪಿ ರದ್ದು ಗೊಳಿಸಬೇಕು’ ಎಂದು ಭಾನುವಾರ ಇಲ್ಲಿ ‘ನಡೆದ ಜೀತ ವಿಮುಕ್ತಿ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶ’ವು ಒತ್ತಾಯಿಸಿತು.

ADVERTISEMENT

ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಹಾಗೂ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟವು ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಜೀವಿಕ ಜಿಲ್ಲಾ ಸಂಚಾಲಕ ಬಸವರಾಜು ಅವರು ಹಕ್ಕೊತ್ತಾಯ ಮಂಡಿಸಿದರು.

‘ರಾಜ್ಯದಲ್ಲಿ 20 ಸಾವಿರ ಜೀತ ವಿಮುಕ್ತ ಕಾರ್ಮಿಕರಿದ್ದು, ಇವರಲ್ಲಿ 7ಸಾವಿರ ಮಂದಿಗೆ ಸರ್ಕಾರ ವಿಮುಕ್ತಿ ಪತ್ರ ನೀಡಿದೆ. ಜೀತಪದ್ಧತಿ ನಿರ್ಮೂಲನೆ ವಿರೋಧಿಯಾಗಿರುವ 2017ರ ಕೇಂದ್ರ ಹಾಗೂ 2022ರ ಕರ್ನಾಟಕದ ಎಸ್‌ಒಪಿಗಳನ್ನು ಕೂಡಲೇ ರದ್ದು ಗೊಳಿಸಬೇಕು’ ಎಂದು ಆಗ್ರಹಪಡಿಸಿತು.

‘ಬೆಳಗಾವಿ, ಮೈಸೂರು, ಚಿಕ್ಕಬಳ್ಳಾಪುರ ಹಾಗೂ ಮಂಡ್ಯ ಜಿಲ್ಲೆಗಳ 2 ಸಾವಿರಕ್ಕೂ ಅಧಿಕ ಜೀತವಿಮುಕ್ತಿ ಕಾರ್ಮಿಕರಿಗೆ 2017–2019ರಿಂದಲೂ ಪುನರ್ವಸತಿ ಪ್ಯಾಕೇಜ್‌ ತಡೆಹಿಡಿದಿದ್ದು, ಕೂಡಲೇ ಅದನ್ನು ಬಿಡುಗಡೆಗೊಳಿಸಲು ಕ್ರಮಕೈಗೊಳ್ಳಬೇಕು’ ಎಂದೂ ಒತ್ತಾಯಿಸಿತು. 

‘ಜೀತದಾಳುಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರೇ ಇದ್ದಾರೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಇವರಿಗಾಗಿ ಕಲ್ಯಾಣ ಯೋಜನೆ ರೂಪಿಸಬೇಕು. ಸ್ವ ಉದ್ಯೋಗಕ್ಕೆ ವಿಶೇಷ ಅನುದಾನ ಹಾಗೂ ನೇರ ಸಾಲ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಲಾಯಿತು.

ಬೇಡಿಕೆಗಳ ಪಟ್ಟಿ ಸ್ವೀಕರಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ‘ವಿಧಾನ ಮಂಡಲ ಅಧಿವೇಶನದ ಬಳಿಕ ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ, ತೀರ್ಮಾನಿಸುತ್ತೇವೆ’ ಎಂದು ಹೇಳಿದರು.

ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ರೈತ ಸಂಘ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ಜೀವಿಕ ಸಂಸ್ಥಾಪಕ ಕಿರಣ್ ಕಮಲ್ ಪ್ರಸಾದ್, ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಮಹದೇವು, ಪ್ರೊ. ಬಾಬು ಮ್ಯಾಥ್ಯು, ಪುರುಷೋತ್ತಮ್‌ ಅವರಿದ್ದರು 

ಜೀತ ಎಂಬುದು ಅತ್ಯಂತ ಅಮಾನವೀಯವಾದುದು. ಇದರಿಂದ ಶೋಷಣೆಗೆ ಒಳಗಾದ ಎಲ್ಲ ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆಡಾ.
ಎಚ್‌.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.