ADVERTISEMENT

ಶೋಷಣೆ, ನೋವಿದೆ, ಇನ್ನು ಕಾಯಲಾಗದು: ಡಾ.ಜಿ.ಪರಮೇಶ್ವರ

ಬೌದ್ಧ ಮಹಾಸಮ್ಮೇಳನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:55 IST
Last Updated 16 ಅಕ್ಟೋಬರ್ 2025, 2:55 IST
ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ   

ಮೈಸೂರು: ‘ಇಂದಿಗೂ ನಾವು ಶೋಷಣೆ ಹಾಗೂ ನೋವುಗಳ ನಡುವೆ  ಇದ್ದೇವೆ. ಇನ್ನು ಕಾಯುವುದಕ್ಕೆ ಆಗುವುದಿಲ್ಲ. ಸರ್ಕಾರಗಳು ಕೊಡುವ ಕಾರ್ಯಕ್ರಮಗಳಿಂದ ನಮ್ಮ ನೋವು ಹೋಗುವುದಿಲ್ಲ. ಹೀಗಾಗಿ ನಾವು ಬುದ್ಧನ ಕಡೆಗೆ ಹೋಗಬೇಕಾಗಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಕರ್ನಾಟಕ ರಾಜ್ಯ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು, ರಾಜ್ಯ ಅಂಬೇಡ್ಕರ್‌ವಾದಿ ಸಂಘ–ಸಂಸ್ಥೆಗಳು ಮತ್ತು ವಿಶ್ವಮೈತ್ರಿ ಬುದ್ಧವಿಹಾರದ ಸಹಯೋಗದಲ್ಲಿ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ‘ಬೌದ್ಧ ಮಹಾಸಮ್ಮೇಳನ–2025’ದಲ್ಲಿ ಅವರು ಮಾತನಾಡಿದರು.

‘ಇಂದಿಗೂ ನಮ್ಮ ಮೇಲಿನ ಶೋಷಣೆ ನಿಂತಿಲ್ಲ. ಗುಡಿಸಲುಗಳಿಗೆ ಬೆಂಕಿ ಹಚ್ಚುವುದು,
ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವುದು ನಿಂತಿಲ್ಲ. ಇದೆಲ್ಲವನ್ನೂ ಯಾವಾಗ ಸರಿಪಡಿಸುತ್ತೀರಿ? ಶ್ರೇಣೀಕೃತ ವ್ಯವಸ್ಥೆಯನ್ನು ಪಾಲಿಸುತ್ತಿರುವ ಹಿಂದೂ ಸಮಾಜವನ್ನು ನಾವು ಪ್ರಶ್ನೆ ಮಾಡಬಾರದಾ?’ ಎಂದು ಕೇಳಿದರು.

ADVERTISEMENT

ಬುದ್ಧ ಎದ್ದು ನಿಂತಿದ್ದಾನೆ: ‘ಇಡೀ ವಿಶ್ವ ಇಂದು ಬುದ್ಧನ ತತ್ವಗಳ ಅಡಿಯಲ್ಲಿ ನಡೆಯಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ಶಾಂತಿ ನೆಲೆಸಬೇಕು ಎಂಬ ಕೂಗು ಎದ್ದಿದೆ. ಹಲವು ಸಂಘರ್ಷಗಳ ನಡುವೆ ಬುದ್ಧ ಮತ್ತೊಮ್ಮೆ ಎದ್ದು ನಿಂತಿದ್ದಾನೆ. ಶೋಷಿತರು, ನೊಂದವರಿಗೆ ಬುದ್ಧ ಬೇಕಾಗಿದ್ದಾನೆ. ಉಳ್ಳವರಿಗೆ ಬುದ್ಧ ಬೇಕಾಗಿಲ್ಲ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ನಡೆದ ಈ ಸಮ್ಮೇಳನವು ಇಡೀ ವಿಶ್ವಕ್ಕೆ ಸಂದೇಶವನ್ನು ಸಾರಿದೆ’ ಎಂದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಬುದ್ಧ ಧರ್ಮ ಪುರಾತನವಾದ ಧರ್ಮ. ಇದು ದೇಶದಲ್ಲಿ ಬಹಳಷ್ಟು ಬೆಳೆಯಬೇಕಿತ್ತು. ಆದರೆ, ಬೇರೆ ದೇಶಗಳಲ್ಲಿ ಬೆಳೆದಿದೆ. ನಮ್ಮಲ್ಲಿ ಅದಕ್ಕೆ ಮನುವಾದಿಗಳು ಅವಕಾಶ ಕೊಡಲಿಲ್ಲ. ಸಮಾನತೆ ಬಯಸುವ ಧರ್ಮವಿದು. ಮುಂದಿನ ಸಮ್ಮೇಳನಕ್ಕೆ ಮಹಿಳೆಯರು ಹಾಗೂ ಮಕ್ಕಳನ್ನು ಕರೆದುಕೊಂಡು ಬರಬೇಕು’ ಎಂದು ಸಲಹೆ ನೀಡಿದರು.

‘ನಳಂದ ವಿವಿ, ಬಸವಣ್ಣನವರ ವಚನಗಳನ್ನು ಯಾಕೆ ಸುಟ್ಟರು, ಸಂವಿಧಾನವನ್ನು ಬದಲಾಯಿಸಲು ಮುಂದಾಗುತ್ತಿದ್ದಾರೇಕೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಅಂಬೇಡ್ಕರ್ ಅನುಯಾಯಿಗಳಿಗೆ ರಾಜಕೀಯ ಅಧಿಕಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕು’ ಎಂದು ಹೇಳಿದರು.

ಎಲ್ಲರಿಗೂ ತಿಳಿಸಬೇಕು: ‘ಸಂವಿಧಾನ ಎಲ್ಲರಿಗೂ ಅನುಕೂಲ ಹಾಗೂ ಸಮಾನ ಅವಕಾಶ ಕೊಟ್ಟಿದೆ ಎಂಬುದನ್ನು ಹೆಚ್ಚು ಹೆಚ್ಚು ತಿಳಿಸಿಕೊಡಬೇಕು. ಬೇರೆ ಸಮಾಜದವರನ್ನೂ ಒಳಗೊಳಿಸಿಕೊಳ್ಳುವ ಕೆಲಸ ಆಗಬೇಕು. ಪ್ರತಿ ವರ್ಷವೂ ಒಂದೊಂದು ಜಿಲ್ಲೆಯಲ್ಲಿ ಬೌದ್ಧ ಮಹಾಸಮ್ಮೇಳನ ನಡೆಯಬೇಕು’ ಎಂದರು.

ಉರಿಲಿಂಗಿಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಆಯುಧಗಳು ಮಾತನಾಡಿದರೆ ದೇಶ ಸರ್ವನಾಶ ಆಗುತ್ತದೆ. ಮಕ್ಕಳಿಗೆ ದೊಣ್ಣೆಗಳ ಬದಲಿಗೆ ಪೆನ್ನು ಕೊಡಬೇಕು. ರಕ್ತವನ್ನು ಬಯಸುವುದು ಧರ್ಮವಲ್ಲ. ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತವನ್ನು ನಾವೆಲ್ಲರೂ ಸೇರಿ ಕಟ್ಟಬೇಕಾಗಿದೆ’ ಎಂದು ತಿಳಿಸಿದರು.

ಕೊಳ್ಳೇಗಾಲ ಜೇತವನದ ಮನೋರಕ್ಖಿತ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಪಿ.ಎಂ.ನರೇಂದ್ರಸ್ವಾಮಿ, ಡಿ.ರವಿಶಂಕರ್, ಸಿ.ಪುಟ್ಟರಂಗಶೆಟ್ಟಿ, ದರ್ಶನ್‌ ಧ್ರುವನಾರಾಯಣ, ವಿಧಾನಪರಿಷತ್‌ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್‌, ಕಳಲೆ ಕೇಶವಮೂರ್ತಿ, ವೇಣುಗೋಪಾಲ್‌, ಡಿ.ಎಸ್.ವೀರಯ್ಯ, ಹೆಜ್ಜಿಗೆ ಶ್ರೀನಿವಾಸಯ್ಯ, ಬಾಲರಾಜ್‌, ಎಚ್‌.ಕೆ.ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಮುಖಂಡ ಮಲ್ಕುಂಡಿ ಮಹದೇವಸ್ವಾಮಿ ಪಾಲ್ಗೊಂಡಿದ್ದರು.

‘ಬೌದ್ಧ ಧರ್ಮ ಸ್ವೀಕಾರ ಮತಾಂತರವಲ್ಲ’

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಬೌದ್ಧ ಧರ್ಮಕ್ಕೆ ಹೋದರೆ ಅದು ಮತಾಂತರವಲ್ಲ. ಸಾಮಾಜಿಕ ಬದಲಾವಣೆ ಹಾಗೂ ಸ್ವಾತಂತ್ರ್ಯ ಪಡೆಯುವುದು. ಸ್ವಾಭಿಮಾನವನ್ನು ಸಂಘಟನಾತ್ಮಕ ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಆದರೆ, ಮಾದಿಗ–ಹೊಲೆಯ ಎಂದು ಪರಸ್ಪರ ದ್ವೇಷಿಸುತ್ತಿರುವುದು ವಿಷಾದನೀಯ’ ಎಂದರು.

‘ಶ್ರೇಣೀಕೃತ ಸಮಾಜ ಹಾಗೂ ವರ್ಣಾಶ್ರಮ ಪದ್ಧತಿಯನ್ನು ಜೀವಂತವಾಗಿಡುವುದು ಆರ್‌ಎಸ್‌ಎಸ್ ಉದ್ದೇಶ. ನಮ್ಮ ವಿವೇಚನೆಗಾಗಿ ಅಂಬೇಡ್ಕರ್ ಇಡೀ ಬದುಕನ್ನೇ ಮುಡುಪಾಗಿಟ್ಟರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.