ADVERTISEMENT

ಮೈಸೂರು: ನಿರೀಕ್ಷೆಯ ಮಹಾಪೂರ, ಸಿಗುವುದೇ ‘ಸಹಕಾರ’

2021–22ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ಇಂದು; ವಿಧಾನಮಂಡಲದತ್ತ ಎಲ್ಲರ ಚಿತ್ತ

ಡಿ.ಬಿ, ನಾಗರಾಜ
Published 8 ಮಾರ್ಚ್ 2021, 4:45 IST
Last Updated 8 ಮಾರ್ಚ್ 2021, 4:45 IST
ಮಂಡಕಳ್ಳಿ ವಿಮಾನ ನಿಲ್ದಾಣ
ಮಂಡಕಳ್ಳಿ ವಿಮಾನ ನಿಲ್ದಾಣ   

ಮೈಸೂರು: ಕೋವಿಡ್‌–19 ಸಾಂಕ್ರಾಮಿಕ ಪಿಡುಗಿನಿಂದ ವರ್ಷವಿಡೀ ನಲುಗಿದ ಮೈಸೂರಿಗರಿಗಾಗಿ; 2021–22ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಯೋಜನೆ ಪ್ರಕಟಿಸಲಿದ್ದಾರಾ?

ಮೈಸೂರು ಜಿಲ್ಲೆಯ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ನೀರಾವರಿ, ರಸ್ತೆ, ಗ್ರಾಮೀಣಾಭಿವೃದ್ಧಿ, ವ್ಯಾಪಾರ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಸರ್ವಾಂಗೀಣ ಪ್ರಗತಿಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಲಿದ್ದಾರಾ?

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ,ಮುಖ್ಯಮಂತ್ರಿಯ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಜಿಲ್ಲೆಗೆ ಹೊಸ ಯೋಜನೆ ಘೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರಾ... ಹೆಚ್ಚಿನ ಅನುದಾನ ತರುವರಾ... ಎಂಬ ಪ್ರಶ್ನೆಗಳ ಸರಮಾಲೆಯೇ ಜಿಲ್ಲೆಯಲ್ಲಿ ಪ್ರತಿಧ್ವನಿಸುತ್ತಿದೆ.

ADVERTISEMENT

ಸರ್ಕಾರದಲ್ಲೂ ಪ್ರಭಾವಿಯಾಗಿದ್ದು, ಮುಖ್ಯಮಂತ್ರಿ ತೆಗೆದುಕೊಳ್ಳುವ ಬಹುತೇಕ ನಿರ್ಧಾರಗಳಲ್ಲಿ ಭಾಗಿಯಾಗುತ್ತಾರೆ ಎನ್ನಲಾದ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ತಮ್ಮ ರಾಜಕೀಯ ಭವಿಷ್ಯವನ್ನು ಮೈಸೂರು ಜಿಲ್ಲೆಯಲ್ಲೇ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ. ಇದಕ್ಕಾಗಿಯೇ ಈ ಬಾರಿಯ ಬಜೆಟ್‌ನಲ್ಲಿ ಮೈಸೂರು ಭಾಗಕ್ಕೆ ಭರಪೂರ ಕೊಡುಗೆ ಕೊಡಿಸಲಿದ್ದಾರೆ ಎಂಬ ನಿರೀಕ್ಷೆ ವಿಜಯೇಂದ್ರ ಅವರ ಆಪ್ತ ವಲಯದ್ದು.

ಸಂಸದರು, ಜಿಲ್ಲೆಯ ಶಾಸಕರು ಸಹ ತಮ್ಮ ಕ್ಷೇತ್ರದ ಪ್ರಗತಿಗಾಗಿ, ಮೈಸೂರಿನ ಅಭಿವೃದ್ಧಿಗಾಗಿ ಅನುದಾನದ ಪ್ರಸ್ತಾವಗಳ ಮಹಾಪೂರವನ್ನೇ ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ. ಪತ್ರವನ್ನು ಬರೆದಿದ್ದಾರೆ. ಮನವಿಯನ್ನು ಕೊಟ್ಟಿದ್ದಾರೆ. ಆಯಾ ಇಲಾಖೆಯ ಸಚಿವರ ಗಮನವನ್ನು ಸೆಳೆದಿದ್ದಾರೆ. ಜಿಲ್ಲಾಡಳಿತ ಸಹ ಜಿಲ್ಲೆಗೆ ಅವಶ್ಯವಿರುವ ಯೋಜನೆಗಳ ಪ್ರಸ್ತಾವ ಸಲ್ಲಿಸಿದೆ.

ಮೈಸೂರಿನಲ್ಲಿರುವ ವಿಶ್ವವಿದ್ಯಾನಿಲಯಗಳು ಸೇರಿದಂತೆ ರಂಗಾಯಣವೂ ತನ್ನ ಬೇಡಿಕೆಯ ಪಟ್ಟಿ ಸಲ್ಲಿಸಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆ, ಘೋಷಣೆಗಳಿಗೂ ಮರು ಜೀವ ಕೊಡುವಂತೆ ವಿವಿಧ ಸಂಘಟನೆಗಳು, ಸಂಘ–ಸಂಸ್ಥೆಗಳು ಸಹ ತಮ್ಮ ಬೇಡಿಕೆಯ ಕೂಗು ಮೊಳಗಿಸಿವೆ.

ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳ ಪ್ರಸ್ತಾವಕ್ಕೆ ಮನ್ನಣೆ ಸಿಗುತ್ತದೆಯಾ? ಯಾವ ಹೊಸ ಯೋಜನೆ ಘೋಷಿಸಬಹುದು? ಜಿಲ್ಲೆಗೆ ಎಷ್ಟು ಅನುದಾನ ಸಿಗಲಿದೆ... ಎಂಬ ಹಲವು ಪ್ರಶ್ನೆಗಳಿಗೆ ಸೋಮವಾರ ಮಧ್ಯಾಹ್ನ (ಮಾರ್ಚ್‌ 8), ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಮಂಡಲದಲ್ಲಿ ಮಂಡಿಸುವ ಬಜೆಟ್‌ನಲ್ಲಿ ಉತ್ತರ ಸಿಗಲಿದೆ. ನಿರೀಕ್ಷೆಗಳ ಮಹಾಪೂರವನ್ನೇ ಹೊಂದಿರುವ ಮೈಸೂರಿಗರ ಬೇಡಿಕೆಗಳಿಗೆ ಬಿಎಸ್‌ವೈ ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದು ಬಹಿರಂಗಗೊಳ್ಳಲಿದೆ.

ಮೈಸೂರು ಜಿಲ್ಲೆಯ ಪ್ರಮುಖ ಬೇಡಿಕೆಗಳು

ಮೈಸೂರಿಗಾಗಿ ಪ್ರತ್ಯೇಕ ಜಲಮಂಡಳಿ

ಹೆಲಿ ಟೂರಿಸಂ, ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ

ಹೋಟೆಲ್‌ಗಳಿಗೆ ಕೈಗಾರಿಕೆ ಸ್ಥಾನಮಾನ

ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ, ಅಭಿವೃದ್ಧಿ

ನಾಗನಹಳ್ಳಿ ರೈಲ್ವೆ ಟರ್ಮಿನಲ್‌ಗೆ ಭೂಮಿ ಮಂಜೂರು; ವಂತಿಕೆ ಭರಿಸುವಿಕೆ

ಬೃಹತ್‌ ಮೈಸೂರು ಮಹಾನಗರ ಪಾಲಿಕೆ ರಚನೆ

ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹೊಸ ಯೋಜನೆ‌

ಕೆರೆ ತುಂಬುವ ಯೋಜನೆ

ನಾಲೆಗಳ ಆಧುನೀಕರಣ

ಉಂಡುವಾಡಿ ಯೋಜನೆಗೆ ಅನುದಾನ

ಶುದ್ಧ ಕುಡಿಯುವ ನೀರು ಪೂರೈಕೆ

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಅಭಿವೃದ್ಧಿ

ಕೆ.ಆರ್.ಆಸ್ಪತ್ರೆ ಮೇಲ್ದರ್ಜೆಗೆ; ಚೆಲುವಾಂಬ ಆಸ್ಪತ್ರೆಗೆ ಸೌಕರ್ಯ

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಆರಂಭ

ಮೈಸೂರಿನಲ್ಲೇ ಫಿಲಂ ಸಿಟಿ

ಮೈಸೂರು ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ

ದಸರಾ ಪ್ರಾಧಿಕಾರ ರಚನೆ

ಹುಣಸೂರು ಜಿಲ್ಲೆ ಘೋಷಣೆ

ವರುಣಾ ತಾಲ್ಲೂಕು ರಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.