ADVERTISEMENT

ವಿವೇಕ ಸ್ಮಾರಕದೊಂದಿಗೆ ಶಾಲೆ ನಿರ್ಮಿಸಿ: ಪುರುಷೋತ್ತಮ್‌

ಮಹಾರಾಣಿ ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 10:04 IST
Last Updated 16 ಆಗಸ್ಟ್ 2022, 10:04 IST
ವಿವೇಕ ಸ್ಮಾರಕದೊಂದಿಗೆ ಮಹಾರಾಣಿ ಎನ್‌ಟಿಎಂ ಶಾಲೆ ನಿರ್ಮಿಸಬೇಕು ಎಂದು ಒತ್ತಾಯಿಸಿದ ಮಹಾರಾಣಿ (ಎನ್.ಟಿ.ಎಂ) ಶಾಲೆಯ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಮಂಗಳವಾರ ಗನ್‌ಹೌಸ್‌ ಸಮೀಪದ ಕುವೆಂ‍ಪು ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು
ವಿವೇಕ ಸ್ಮಾರಕದೊಂದಿಗೆ ಮಹಾರಾಣಿ ಎನ್‌ಟಿಎಂ ಶಾಲೆ ನಿರ್ಮಿಸಬೇಕು ಎಂದು ಒತ್ತಾಯಿಸಿದ ಮಹಾರಾಣಿ (ಎನ್.ಟಿ.ಎಂ) ಶಾಲೆಯ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಮಂಗಳವಾರ ಗನ್‌ಹೌಸ್‌ ಸಮೀಪದ ಕುವೆಂ‍ಪು ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು   

ಮೈಸೂರು: ವಿವೇಕ ಸ್ಮಾರಕದ ಜೊತೆ ಮಹಾರಾಣಿ ಎನ್‌ಟಿಎಂ ಶಾಲೆ ನಿರ್ಮಾಣವೂ ನಡೆಯಬೇಕು ಎಂದು ಒತ್ತಾಯಿಸಿ ‘ಮಹಾರಾಣಿ ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟ’ ಮಂಗಳವಾರ ಪ್ರತಿಭಟನೆ ನಡೆಸಿತು.

ಗನ್‌ಹೌಸ್‌ನ ಕುವೆಂಪು ಉದ್ಯಾನದಲ್ಲಿ ಜಮಾಯಿಸಿದ ಒಕ್ಕೂಟದ ಸದಸ್ಯರು ಸರ್ಕಾರ ಹಾಗೂ ರಾಮಕೃಷ್ಣ ಆಶ್ರಮದ ವಿರುದ್ಧ ಘೋಷಣೆ ಕೂಗಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಪುರುಷೋತ್ತಮ್‌ ಮಾತನಾಡಿ, ‘ವಾಣಿವಿಲಾಸ ಸನ್ನಿಧಾನ ನಿರ್ಮಿಸಿದ್ದ ಬಾಲಕಿಯರ ಶಾಲೆಯನ್ನು ಕೆಡವಿ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡುತ್ತಿರುವುದು ವಿವೇಕರಿಗೆ ಮಾಡಿದ ಅವಮಾನವಾಗಿದೆ. ಶಾಲೆಯ ಸಮಾಧಿ ಮೇಲೆ ಸ್ಮಾರಕವನ್ನು ಅವರೂ ಒಪ್ಪುತ್ತಿರಲಿಲ್ಲ’ ಎಂದರು.

ADVERTISEMENT

‘ಸುತ್ತೂರು ಸ್ವಾಮೀಜಿ, ಸಂಸದ ವಿ.ಶ್ರೀನಿವಾಸಪ್ರಸಾದ್‌ ಅವರ ಉಪಸ್ಥಿತಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಸ್ಮಾರಕದ ಜೊತೆ ಶಾಲೆಯನ್ನು ನಿರ್ಮಿಸುವ ಪ್ರಸ್ತಾವಕ್ಕೆ ರಾಮಕೃಷ್ಣ ಆಶ್ರಮ ಒಪ್ಪಿತ್ತು. ಆದರೆ, ಏಕಾಏಕಿ ಶಾಲೆಯನ್ನು ಕೆಡವಲಾಗಿದೆ. ಆಶ್ರಮವು ಭೂಮಿಪೂಜೆಯನ್ನು ನೆರವೇರಿಸಿರುವುದು ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಪ್ಪಂದವನ್ನು ಉಲ್ಲಂಘಿಸಿರುವ ಆಶ್ರಮವು ಶಾಲೆಯ ಉಳಿವಿಗೆ ಹೋರಾಡಿದವರಿಗೂ ಅಪಚಾರ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಡಿಕೆ ಈಡೇಸುವುದಾಗಿ ತಿಳಿಸಿದ್ದರು. ಇದೀಗ ಅವರೂ ಆಶ್ರಮ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಶಾಲೆ ನಿರ್ಮಾಣ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಸಿದರು.

‘ಆಶ್ರಮದ ಮಾತನ್ನು ನಂಬಿ ಒಕ್ಕೂಟವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿಲ್ಲ. ಸಂಧಾನ ಸಭೆಯಲ್ಲಿ ಭಾಗವಹಿಸಿದ್ದ ಡಿ.ಮಾದೇಗೌಡ ಸೇರಿದಂತೆ ಯಾರೊಬ್ಬರೂ ಈಗ ಮಾತನಾಡುತ್ತಿಲ್ಲ. ಆಶ್ರಮದವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

ರೈತಸಂಘದ ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್‌, ಕರ್ನಾಟಕ ಕಾವಲು ಪಡೆಯ ಮೋಹನ್‌ ಕುಮಾರ್ ಗೌಡ, ಕರ್ನಾಟಕ ಜನಪರ ಶಕ್ತಿ ವೇದಿಕೆ ಅಧ್ಯಕ್ಷರಾದ ಮಧುಮತಿ, ಎಸ್‌.ಬಾಲಕೃಷ್ಣ, ಎಲ್‌ಐಸಿ ಸಿದ್ದಪ್ಪ, ಸುನಿಲ್‌ ಕುಮಾರ್, ಸಿದ್ದಲಿಂಗಪ್ಪ, ಪ್ರಕಾಶ್ ಇದ್ದರು.

ದಲಿತ ಬಾಲಕ ಹತ್ಯೆ ಖಂಡಿಸಿ ಪ್ರತಿಭಟನೆ

ಮೈಸೂರು: ರಾಜಸ್ಥಾನದ ಶಾಲೆಯೊಂದರಲ್ಲಿಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಶಿಕ್ಷಕನಿಂದ ದಲಿತ ಬಾಲಕನ ಹತ್ಯೆ ನಡೆದಿರುವುದನ್ನು ಖಂಡಿಸಿ ‘ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ’ದ ಸದಸ್ಯರು ಪ್ರತಿಭಟನೆ ನಡೆಸಿದರು.

ಮಾನಸಗಂಗೋತ್ರಿಯ ಅಂಬೇಡ್ಕರ್‌ ಪ್ರತಿಮೆ ಎದುರು ಸೇರಿದ ಸದಸ್ಯರು, ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಎಚ್‌.ಎಸ್.ನಟರಾಜ ಮಾತನಾಡಿ, ‘ಬಡವರು, ಶೋಷಿತರ ಮೇಲೆ ಗದಾಪ್ರಹಾರ ಮುಂದುವರಿದಿದೆ. ಬ್ರಿಟಿಷರ ವಿರುದ್ಧ ಸಾಮಾನ್ಯ ಜನರೂ ಹೋರಾಡಿದ್ದಾರೆ. ಆದರೆ, ಸ್ವತಂತ್ರ ಭಾರತದಲ್ಲಿ ದಲಿತರನ್ನು ಹೀನಾಯವಾಗಿ ಇನ್ನೂ ನಡೆಸಿಕೊಳ್ಳಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಕಲ್ಲಹಳ್ಳಿ ಕುಮಾರ್‌ ಮಾತನಾಡಿ, ‘ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಮಾಜದಲ್ಲಿ ಅಸ್ಪೃಶ್ಯತೆ,ಜಾತಿಗ್ರಸ್ಥ ಮನಸ್ಥಿತಿ ಜೀವಂತವಾಗಿದೆ ಎಂಬುದಕ್ಕೆ ಘಟನೆಯು ನಿದರ್ಶನವಾಗಿದೆ. ಹಿಂದೂ ಒಂದು ಎನ್ನುವವರು ದಲಿತರ ಮೇಲೆ ದೌರ್ಜನ್ಯ ನಡೆದಾಗ ದನಿ ಎತ್ತುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಅವಿನಾಶ್‌, ರಂಗನಾಥ್‌, ಕೆ.ಮಹದೇವಸ್ವಾಮಿ, ಜಗದೀಶ್‌, ಮಹೇಶ್‌, ಕಲ್ಲಪ್ಪ, ಟಿ.ಎಂ.ಕಾರ್ತಿಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.