ಮೈಸೂರು: ಈ ಬಾರಿಯ ಸುತ್ತೂರು ಜಾತ್ರೆಯಲ್ಲಿ ಜಾನುವಾರುಗಳ ಜಾತ್ರೆಯೂ ಜೋರಾಗಿದ್ದು, ನೂರಾರು ರಾಸುಗಳು ಪ್ರದರ್ಶನಕ್ಕೆ ಬಂದಿವೆ.
ಕಳೆದ ಮುಂಗಾರು ಫಲಪ್ರದವಾಗಿದ್ದು, ರಾಗಿ–ಭತ್ತ ಮೊದಲಾದ ಧನ್ಯಗಳ ಫಸಲು ರೈತರ ಮನೆ ಸೇರಿದೆ. ಹೀಗಾಗಿ ಕೃಷಿಕರೂ ಉತ್ಸಾಹದಿಂದ ತಮ್ಮಲ್ಲಿನ ನಾಡ ಹಸು–ಹೋರಿಗಳನ್ನು ತಂದಿದ್ದಾರೆ. ಉತ್ತಮ ಜೋಡೆತ್ತುಗಳನ್ನು ಕೊಳ್ಳಲೆಂದೂ ಸಾಕಷ್ಟು ಮಂದಿ ಧಾವಿಸುತ್ತಿದ್ದಾರೆ. ಒಟ್ಟಾರೆ ಜಾತ್ರೆ ಕಳೆಕಟ್ಟಿದೆ.
ಸಂಕ್ರಾಂತಿ ಸಂದರ್ಭದಲ್ಲಿ ಚನ್ನಪಟ್ಟಣದ ಕೆಂಗಲ್‌ನ ಅಯ್ಯನಗುಡಿ ಜಾತ್ರೆಗೆ ತೆರಳಿದ್ದ ರೈತರು ಅಲ್ಲಿಂದ ನೇರವಾಗಿ ತಮ್ಮ ದನಗಳನ್ನು ಸುತ್ತೂರಿಗೆ ಕರೆತಂದಿದ್ದಾರೆ. ಮುಂದೆ ಮುಡುಕುತೊರೆ ಸೇರಿದಂತೆ ನಾಲ್ಕಾರು ಜಾತ್ರೆಗಳು ನಡೆಯಲಿದ್ದು, ಅಲ್ಲಿಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ.
ಜಾತ್ರೆಯ ಮುಖ್ಯ ವೇದಿಕೆಗೆ ಹೊಂದಿಕೊಂಡಂತೆ ಇರುವ ಮೈದಾನದಲ್ಲಿ ಜಾನುವಾರು ಸಂತೆಯನ್ನು ಆಯೋಜಿಸಲಾಗಿದೆ. ನೂರು ಜೋಡಿಯಷ್ಟು ಎತ್ತುಗಳು ಬಂದಿವೆ. ಎಂದಿನಂತೆ ಈ ಬಾರಿಯೂ ಉತ್ತಮ ರಾಸುಗಳಿಗೆ ಜಾತ್ರಾ ಸಮಿತಿ ಬಹುಮಾನ ನೀಡುತ್ತಿದೆ.
‘ಬರಗಾಲದ ಕಾರಣಕ್ಕೆ ಕಳೆದ ವರ್ಷ ನಿರೀಕ್ಷೆಯಷ್ಟು ಜಾನುವಾರುಗಳು ಬಂದಿರಲಿಲ್ಲ. ಈ ವರ್ಷ ಆರಂಭದಿಂದಲೇ ರೈತರು ರಾಸುಗಳನ್ನು ಕರೆತಂದಿದ್ದಾರೆ. ಹಿಂದಿನ ವರ್ಷಗಳಲ್ಲಿ ಒಟ್ಟಾರೆ ಮೂರು ರಾಸುಗಳಿಗೆ ಮಾತ್ರ ಸಮಿತಿಯು ಬಹುಮಾನ ನೀಡುತ್ತಿತ್ತು. ಈ ವರ್ಷದಿಂದ ಎರಡು ಹಲ್ಲಿನಿಂದ ಎಂಟು ಹಲ್ಲಿನವರೆಗೆ ದನಗಳ ವಯಸ್ಸಿಗೆ ಅನುಗುಣವಾಗಿ ಪ್ರತ್ಯೇಕ ಬಹುಮಾನ ನೀಡಲಾಗುತ್ತಿದೆ. ಹೀಗಾಗಿ ಹೆಚ್ಚು ರಾಸುಗಳು ಬಂದಿವೆ’ ಎನ್ನುತ್ತಾರೆ ತಿ. ನರಸೀಪುರ ತಾಲ್ಲೂಕಿನ ಮೇಗಳಕೊಪ್ಪಲಿನ ರೈತರಾದ ಮಧು ಹಾಗೂ ದಿವಾಕರ್.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಜಾತ್ರೆಯಲ್ಲಿನ ರಾಸುಗಳ ಸಂಖ್ಯೆ ಹೆಚ್ಚಿದೆ. ಮಾರಾಟಕ್ಕಿಂತ ಪ್ರದರ್ಶನಕ್ಕೆ ಬಂದ ಜಾನುವಾರುಗಳು ಹೆಚ್ಚಿವೆ.–ಮಧು, ರೈತ ಮೇಗಳಕೊಪ್ಪಲು
ಮೈಸೂರು, ತಿ. ನರಸೀಪುರ, ನಂಜನಗೂಡು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಬಂದಿವೆ. ಹೊರ ಜಿಲ್ಲೆಗಳಿಂದಲೂ ರೈತರು ಎತ್ತುಕೊಳ್ಳಲು ಕೊಂಡುಕೊಳ್ಳಲು ಬಂದಿದ್ದಾರೆ.
ನಾಡ ಹಸುಗಳ ಬೆಲೆಯು ಜೋಡಿಗೆ ₹1 ಲಕ್ಷದಿಂದ ಆರಂಭಗೊಂಡು ₹5 ಲಕ್ಷದವರೆಗೂ ಇದೆ. ದಷ್ಟಪುಷ್ಟವಾದ ಎತ್ತುಗಳ ಬೆಲೆಯು ₹3 ಲಕ್ಷದಿಂದ ಆರಂಭಗೊಂಡು ₹10 ಲಕ್ಷದವರೆಗೂ ಇದೆ. ಬನ್ನೂರು ಹೋಬಳಿಯ ಯಾಚೇನಹಳ್ಳಿಯ ವೈ.ಕೆ. ಸಿದ್ದರಾಮು ಅವರ ಎತ್ತುಗಳು ಪ್ರದರ್ಶನದಲ್ಲಿ ಗಮನ ಸೆಳೆದಿದ್ದು, ₹10 ಲಕ್ಷದವರೆಗೂ ಬೆಲೆ ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.