ADVERTISEMENT

ಮೈಸೂರು: ಫುಟ್‌ಬೋರ್ಡ್ ಮೇಲೆ ವಿದ್ಯಾರ್ಥಿನಿಯರ ಪ್ರಯಾಣ!

ಶಕ್ತಿ ಯೋಜನೆಯಿಂದ ಬಸ್‌ಗಳಲ್ಲಿ ನೂಕುನುಗ್ಗಲು: ವಾಹನ ಏರಲು ಪರದಾಟ

ಆರ್.ಜಿತೇಂದ್ರ
Published 16 ಜೂನ್ 2023, 1:03 IST
Last Updated 16 ಜೂನ್ 2023, 1:03 IST
ಮೈಸೂರಿನ ರಾಮಸ್ವಾಮಿ ವೃತ್ತ ಸಮೀಪ ಗುರುವಾರ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸಿದ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ್. ಟಿ.
ಮೈಸೂರಿನ ರಾಮಸ್ವಾಮಿ ವೃತ್ತ ಸಮೀಪ ಗುರುವಾರ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸಿದ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ್. ಟಿ.   

ಮೈಸೂರು: ಶಕ್ತಿ‌ ಯೋಜನೆ ಜಾರಿಗೊಂಡ ಬಳಿಕ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಆದರೆ, ಅದಕ್ಕೆ ತಕ್ಕಂತೆ ಬಸ್‌ಗಳು ಹೆಚ್ಚಾಗಿಲ್ಲ. ಇದರಿಂದಾಗಿ ಬೆಳಿಗ್ಗೆ–ಸಂಜೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಲಿದ್ದು, ವಿದ್ಯಾರ್ಥಿಗಳು ಬಸ್ ಏರಲು ಪ್ರಯಾಸಪಡುತ್ತಿದ್ದಾರೆ.

ದಾಖಲಾತಿ ಪ್ರಕ್ರಿಯೆ ಮುಗಿದಿರುವುದರಿಂದ ಬಸ್‌ಗಳು ವಿದ್ಯಾರ್ಥಿಗಳಿಂದ ತುಂಬುತ್ತಿವೆ. ಕಡಿಮೆ ಬಸ್‌ಗಳಿರುವುದರಿಂದ ನೂಕುನುಗ್ಗಲಿನಲ್ಲೇ ಪರದಾಡಿಕೊಂಡು ತೆರಳುವ ದೃಶ್ಯ ಸಾಮಾನ್ಯವಾಗಿದೆ.

ನಗರದ ಕೇಂದ್ರೀಯ ಬಸ್ ನಿಲ್ದಾಣ, ರಾಮಸ್ವಾಮಿ ವೃತ್ತ, ಅಗ್ರಹಾರ ವೃತ್ತ, ಮಹಾರಾಣಿ ಕಲಾ ಕಾಲೇಜು ಮೊದಲಾದ ಕಡೆಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ನೂಕುನುಗ್ಗಲಿನಲ್ಲಿ ಬಸ್ ಏರಲು ಪ್ರಯಾಸ ಪಡುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು. ಕೆಲವು ವಿದ್ಯಾರ್ಥಿನಿಯರು ಫುಟ್‌ಬೋರ್ಡ್‌ ಮೇಲೆಯೂ ನಿಂತು ಪ್ರಯಾಣಿಸಬೇಕಾಯಿತು. ಬಸ್‌ಗಳ ಒಳಗೆ ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದು, ಕಂಡಕ್ಟರ್‌ಗಳು ಎಲ್ಲರಿಗೂ ಟಿಕೆಟ್ ನೀಡಲು ಪರದಾಡುತ್ತಿದ್ದಾರೆ.

ADVERTISEMENT

‘ವಿದ್ಯಾರ್ಥಿಗಳಿಗೆ ಈ ಹಿಂದೆಯೂ ಸಮಸ್ಯೆ ಇತ್ತು. ಈಗ ಹೆಚ್ಚಾಗಿದೆ. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಪರದಾಡಬೇಕು. ಕೆಲವೊಮ್ಮೆ ಮೊದಲ ತರಗತಿಗಳು ತಪ್ಪುತ್ತವೆ. ಪ್ರಯೋಗಾಲಯದ ತರಗತಿಗಳು ತಪ್ಪಿದರೆ ತೊಂದರೆಯಾಗುತ್ತದೆ’ ಎಂದು ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.

ತಾಲ್ಲೂಕು ಕೇಂದ್ರಗಳಲ್ಲೂ ಕೊರತೆ: ನಂಜನಗೂಡು, ಶ್ರೀರಂಗಪಟ್ಟಣ, ತಿ. ನರಸೀಪುರ, ಹುಣಸೂರು, ಎಚ್‌.ಡಿ. ಕೋಟೆ, ಪಿರಿಯಾಪಟ್ಟಣ ಮೊದಲಾದ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಪದವಿ ಕಲಿಕೆಗೆ ಬರುವ ವಿದ್ಯಾರ್ಥಿಗಳದ್ದೂ ಇದೇ ಕಥೆ.

ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳ ಕೊರತೆ ಇದೆ. ಈ ನಡುವೆ ಗ್ರಾಮೀಣ ಜನರೂ ಖಾಸಗಿ ಬಸ್‌ಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳತ್ತ ಬಂದಿದ್ದು, ಸಹಜವಾಗಿಯೇ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ಬಸ್‌ಗಳ ಹೆಚ್ಚಳವಿಲ್ಲ:
ಜೂನ್‌ 11ರಿಂದ ರಾಜ್ಯದಲ್ಲಿ ಶಕ್ತಿ ಯೋಜನೆಯು ಜಾರಿಗೆ ಬಂದ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಪ್ರಮಾಣವು ಗಣನೀಯ ಏರಿಕೆ ಕಾಣುತ್ತಿದೆ. ಮೈಸೂರು ಘಟಕ ವ್ಯಾಪ್ತಿಯಲ್ಲಿ 1,071 ಬಸ್‌ಗಳಿದ್ದು, ನಿತ್ಯ ಸರಾಸರಿ 4.09 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈಗ ಈ ಪ್ರಯಾಣಿಕರ ಪ್ರಮಾಣ ಶೇ 10-15ರಷ್ಟು ಹೆಚ್ಚಾಗಿದೆ. ಆದರೆ, ಬಸ್‌ಗಳ ಸಂಖ್ಯೆ ಮಾತ್ರ ಹೆಚ್ಚಿಲ್ಲ.
ಮೈಸೂರಿನ ರಾಮಸ್ವಾಮಿ ವೃತ್ತ ಸಮೀಪ ಗುರುವಾರ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸಿದ ವಿದ್ಯಾರ್ಥಿನಿಯರು ಪ್ರಜಾವಾಣಿ ಚಿತ್ರ/ಅನೂಪ್ ರಾಘ್ ಟಿ.
ಬೆಳಿಗ್ಗೆ 8ರಿಂದ 9ರವರೆಗೆ ‌ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು ಬಸ್ ಹತ್ತುವುದೇ ಕಷ್ಟವಾಗುತ್ತಿದೆ. ಕಾಲೇಜಿಗೆ ತಡವಾಗುತ್ತದೆ ಎಂಬ ಕಾರಣಕ್ಕೆ ನಿಲ್ದಾಣದಿಂದ ನಡದೇ ಹೋಗುತ್ತಿದ್ದೇವೆ
- ಸುಮಾ, ವಿದ್ಯಾರ್ಥಿನಿ ಮಹಾರಾಣಿ ಕಾಲೇಜು

ಈ ಕುರಿತು ಪ್ರತಿಕ್ರಿಯೆಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮೊಬೈಲ್ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗ ಸಿಟಿ ಬಸ್‌ ಏರಲು ನೂಕುನುಗ್ಗಲು ಕಂಡುಬಂತು ಪ್ರಜಾವಾಣಿ ಚಿತ್ರ/ಅನೂಪ್ ರಾಘ್ ಟಿ.
ಭದ್ರತೆಗೆ ಗೃಹರಕ್ಷಕರು ಪೊಲೀಸರ ನಿಯೋಜನೆ
ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಕೆಎಸ್‌ಆರ್‌ಟಿಸಿಯು ನಗರ ಹಾಗೂ ಕೇಂದ್ರೀಯ ಬಸ್ ನಿಲ್ದಾಣಗಳಲ್ಲಿ ಭದ್ರತೆಗೆ ಗೃಹರಕ್ಷಕ ದಳ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಯಾಣಿಕರು ಬಸ್ ಹತ್ತುವ ಸಂದರ್ಭಗಳಲ್ಲಿ ನೂಕುನುಗ್ಗಲು ಉಂಟಾದಾಗ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದ ಬಸ್‌ ನಿಲುಗಡೆ ತಾಣದಲ್ಲಿಯೂ ಈ ಕಾವಲು ಇದೆ. ಸರಗಳ್ಳರು ಪಿಕ್‌ಪಾಕೆಟ್‌ ಮಾಡುವವರು ಕೈಚಳಕ ತೋರುವ ಸಾಧ್ಯತೆ ಇದ್ದು ಎಚ್ಚರದಿಂದ ಇರುವಂತೆ ಸೂಚಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.