
ಮೈಸೂರು: ‘ಬೆಣ್ಣೆಹಣ್ಣು (ಬಟರ್‌ಫ್ರೂಟ್) ಬಹಳ ಬೇಡಿಕೆ ಗಳಿಸಿದ್ದು, ರೈತರು ಈ ಬೆಳೆಯತ್ತ ಗಮನಹರಿಸಬೇಕು’ ಎಂದು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ತನ್ವೀರ್ ಅಹ್ಮದ್ ಸಲಹೆ ನೀಡಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತಾಲ್ಲೂಕಿನ ಯಲಚಹಳ್ಳಿಯ ತೋಟಗಾರಿಕೆ ಕಾಲೇಜಿನಲ್ಲಿ ಈಚೆಗೆ ‘ಬೆಣ್ಣೆ ಹಣ್ಣು ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆಗಳು’ ವಿಷಯದ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೋವಿಡ್ ನಂತರ ಆರೋಗ್ಯದತ್ತ ಜನರು ಕಾಳಜಿ ವಹಿಸುವುದು ಹೆಚ್ಚಾದ ಕಾರಣ ಬೆಣ್ಣೆಹಣ್ಣಿಗೆ ಬೇಡಿಕೆ ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಅವಕಾಶವನ್ನು ಕೃಷಿಕರು ಬಳಸಿಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ಸಿ.ಎನ್. ಹಂಚಿನಮನಿ, ‘ರೈತರು ಒಂದೇ ಬೆಳೆಯ ಮೇಲಷ್ಟೇ ಅವಲಂಬಿತರಾಗದೇ ಬಹು ಬೆಳೆ ಪದ್ಧತಿ ಅನುಸರಿಸಿದರೆ ಹಾಗೂ ಕೃಷಿಯ ಉಪಕಸುಬುಗಳಲ್ಲಿ ತೊಡಗಿದರೆ ಸುಸ್ಥಿರತೆ ಜೊತೆಗೆ ಲಾಭವೂ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ಸಂಶೋಧಕ ಕರುಣಾಕರನ್ ಜಿ. ಅವರು ಬೆಣ್ಣೆಹಣ್ಣಿನ ಪ್ರಸ್ತುತ ಸ್ಥಿತಿ, ವಾತಾವರಣ, ಮಣ್ಣು, ಸಸಿ ಉತ್ಪಾದನೆ, ಬೇಸಾಯ ಕ್ರಮಗಳು ಹಾಗೂ ಮಾರುಕಟ್ಟೆ ಬೇಡಿಕೆ-ಬೆಲೆ ಕುರಿತು ಮಾಹಿತಿ ನೀಡಿದರು.
‘ಬಟರ್‌ಫ್ರೂಟ್ ಬೆಳೆಯಲ್ಲಿ ಜೈವಿಕ ಉತ್ಪನ್ನಗಳ ಬಳಕೆ ಹಾಗೂ ಉಪಯೋಗ’ ಕುರಿತು ಮಂಜುನಾಥ್ ಜಿ., ‘ಸಂಸ್ಕರಣೆ, ಶೇಖರಣೆ ಹಾಗೂ ಮೌಲ್ಯವರ್ಧನೆ ಅವಕಾಶಗಳು’ ಬಗ್ಗೆ ಚಂದನ್ ಕೆ. ಉಪನ್ಯಾಸ ನೀಡಿದರು.
ವಿಷಯ ತಜ್ಞರಾದ ಅರವಿಂದ ಕುಮಾರ್ ಜೆ.ಎಸ್., ಶಿವಕುಮಾರ್ ಕೆ.ಎಂ., ಮನುಕುಮಾರ್ ಎಚ್.ಆರ್., ಮಮತಾಲಕ್ಷ್ಮಿ ಎನ್., ಸಿದ್ದಪ್ಪ ಆರ್. ಮತ್ತು ಮುತ್ತುರಾಜು ಜಿ.ಪಿ. ಅವರು ರೈತರೊಂದಿಗೆ ಸಂವಾದ ನಡೆಸಿದರು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.