ADVERTISEMENT

ಉಪಚುನಾವಣೆ: ಹುಣಸೂರು ಟಿಕೆಟ್‌ಗಾಗಿ ಈಗಲೇ ಪೈಪೋಟಿ

ಚಾಲ್ತಿಯಲ್ಲಿ ಪ್ರಮುಖರ ಹೆಸರು; ಮೈತ್ರಿಗೆ ನಾಯಕರ ಸಮ್ಮತಿ ಇಲ್ಲ

ಕೆ.ಓಂಕಾರ ಮೂರ್ತಿ
Published 1 ಡಿಸೆಂಬರ್ 2019, 14:07 IST
Last Updated 1 ಡಿಸೆಂಬರ್ 2019, 14:07 IST
ಜಿ.ಟಿ.ದೇವೇಗೌಡ
ಜಿ.ಟಿ.ದೇವೇಗೌಡ   

ಮೈಸೂರು: ಅಡಗೂರು ಎಚ್‌.ವಿಶ್ವನಾಥ್‌ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡ ಬೆನ್ನಲೇ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ.

ಕಾಂಗ್ರೆಸ್‌ ಈಗಲೇ ಸಿದ್ಧತೆ ಆರಂಭಿಸಿದ್ದರೆ, ಜೆಡಿಎಸ್‌ ಹಾಗೂ ಬಿಜೆಪಿ ಪಾಳಯದಲ್ಲಿ ದಿನಕ್ಕೊಬ್ಬರ ಹೆಸರು ಕೇಳಿ ಬರುತ್ತಿದೆ. ಜೆಡಿಎಸ್‌ ತನ್ನ ಸ್ಥಾನ ಉಳಿಸಿಕೊಳ್ಳಬೇಕಾದ ಅನಿವಾರ್ಯದಲ್ಲಿದ್ದರೆ, ಕಾಂಗ್ರೆಸ್‌ ತನ್ನ ಪ್ರತಿಷ್ಠೆಯನ್ನು ಪಣಕ್ಕೊಡ್ಡಿದೆ. ಇನ್ನು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸವಾಲಾಗಿ ಸ್ವೀಕರಿಸಿದೆ.

ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲು ಜೆಡಿಎಸ್‌–ಕಾಂಗ್ರೆಸ್‌ನಲ್ಲಿ ಯಾರೊಬ್ಬರೂ ಸಿದ್ಧರಿಲ್ಲ. ಹೀಗಾಗಿ, ತ್ರಿಕೋನ ಪೈಪೋಟಿ ಏರ್ಪಡುವುದು ಬಹುತೇಕ ಖಚಿತ.

ADVERTISEMENT

ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿಶ್ವನಾಥ್‌ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದು, ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ಆರಂಭಿಸಿದೆ. ಸಿ.ಪಿ.ಯೋಗೇಶ್ವರ್‌ ಅವರ ಹೆಸರೂ ಕೇಳಿಬರುತ್ತಿದೆ. ಈ ಕುರಿತು ವಿಶ್ವನಾಥ್‌ ಜೊತೆ ಪಕ್ಷದ ಮುಖಂಡರು ಚರ್ಚಿಸುತ್ತಿದ್ದಾರೆ.

‘ಮಂತ್ರಿ ಮಂಡಲ ರಚನೆಯಾದ ಮೇಲೆ ಬೆಂಗಳೂರಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸುತ್ತೇವೆ. ಇದುವರೆಗೆ ಯಾರ ಹೆಸರು ಕೂಡ ಅಂತಿಮಗೊಂಡಿಲ್ಲ. ಸದ್ಯ ಜಿಲ್ಲೆಯಲ್ಲಿ ಸದಸ್ವತ್ವ ನೋಂದಣಿ ಅಭಿಯಾನಕ್ಕೆ ಆದ್ಯತೆ ನೀಡಿದ್ದೇವೆ’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನಿಂದ ಎಚ್‌.ಪಿ.ಮಂಜುನಾಥ್ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ. ಅವರು ಈ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಈ ಕ್ಷೇತ್ರದ ವೀಕ್ಷಕರನ್ನಾಗಿ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್‌ ಸೇಠ್‌. ಡಾ.ಯತೀಂದ್ರ, ಅನಿಲ್‌ ಚಿಕ್ಕಮಾದು, ಮಾಜಿ ಶಾಸಕ ಕೆ.ವೆಂಕಟೇಶ್‌ ಅವರನ್ನು ನೇಮಿಸಿದೆ.

‘ಉಪಚುನಾವಣೆಗೆ ಸಿದ್ಧರಾಗುವಂತೆ ಸೂಚನೆ ಬಂದಿದೆ. ಮಂಜುನಾಥ್‌ ಅವರನ್ನೇ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದಾಗಿ ಹೈಕಮಾಂಡ್‌ ಕೂಡ ಹೇಳಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ಹೇಳಿದರು.

ಪ್ರಮುಖ ಸಮಸ್ಯೆ ಇರುವುದು ಜೆಡಿಎಸ್‌ನಲ್ಲಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಟಿಕೆಟ್‌ ವಿಚಾರವಾಗಿ ಗಲಾಟೆಯೇ ನಡೆದಿತ್ತು. ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್‌ ಗೌಡ ಆಗ ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಹೆಸರೂ ಕೇಳಿಬಂದಿತ್ತು. ಆದರೆ, ಕಾಂಗ್ರೆಸ್‌ನಿಂದ ಬಂದಿದ್ದ ವಿಶ್ವನಾಥ್‌ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಅದಕ್ಕೂ ಮುನ್ನ ಮೈಸೂರಿನ ಸಾ.ರಾ.ಕನ್ವೆನ್ಷನ್‌ ಹಾಲ್‌ನಲ್ಲಿ ಕರೆದಿದ್ದ ಸಭೆಯಲ್ಲಿ ಟಿಕೆಟ್‌ ವಿಚಾರವಾಗಿ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲೇ ಕೈಕೈ ಮಿಲಾಯಿಸಿದ್ದರು.

ಈ ಬಾರಿ ಮತ್ತೆ ಹರೀಶ್‌ ಗೌಡ ಹೆಸರು ಚಾಲ್ತಿಯಲ್ಲಿದೆ. ಜೊತೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪ್ರಜ್ವಲ್‌ ಹೆಸರನ್ನೂ ಹರಿಬಿಡಲಾಗಿದೆ. ಒಕ್ಕಲಿಗ ಹಾಗೂ ಕುರುಬ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ 1998 (ಉಪಚುನಾವಣೆ), 2004ರಲ್ಲಿ ಜಿ.ಟಿ.ದೇವೇಗೌಡರು ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.