
ಸಿ. ಉಮಾಮಹಾದೇವ್
ತಿ.ನರಸೀಪುರ: ಕೆಎಸ್‌ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಯೋಜನೆ ಕೈಬಿಟ್ಟು ಸ್ಥಳೀಯ ಕಾರ್ಖಾನೆ ಅಭಿವೃದ್ಧಿ ಜತೆಗೆ ಪಟ್ಟಣದ ಹೊರವಲಯದಲ್ಲಿ ರೇಷ್ಮೆ ಉದ್ಯಮ ವಿಸ್ತರಣಾ ಘಟಕಗಳನ್ನು ನಿರ್ಮಿಸಿ ನೂರಾರು ಮಂದಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ (ಬಣರಹಿತ) ಜಿಲ್ಲಾ ಸಂಚಾಲಕ ಆಲಗೂಡು ಸಿ. ಉಮಾಮಹದೇವ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
‘ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ಬೇಡ ಎಂದು ಒಂದು ವರ್ಷದ ಹಿಂದೆಯೇ ನಮ್ಮ ಸಂಘಟನೆ ಕಾರ್ಮಿಕರೊಡಗೂಡಿ ಜಿಲ್ಲಾಧಿಕಾರಿ ಹಾಗೂ ಹಾಗೂ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆವು. ಅಂದು ಯಾರೂ ಬೆಂಬಲ ನೀಡಲಿಲ್ಲ. ಈಗ ಎಲ್ಲರೂ ಹೋರಾಟಕ್ಕೆ ಬರುತ್ತಿದ್ದಾರೆ.
ಕ್ರೀಡಾಂಗಣ ನಿರ್ಮಾಣಕ್ಕೆ ಈ ಸ್ಥಳ ಸೂಕ್ತವಲ್ಲ. ಸರ್ಕಾರ ಈಗಾಗಲೇ ಕೈಗೊಂಡ ನಿರ್ಧಾರ ಮರುಪರಿಶೀಲಿಸುವ ಅಗತ್ಯವಿದೆ. ಗುಣಮಟ್ಟದ ಹಾಗೂ ಲಾಭದಾಯಕ ಉದ್ಯಮಕ್ಕೆ ಅಡ್ಡಿಯಾಗದಂತೆ ಸರ್ಕಾರ ಸೂಕ್ತ ಕ್ರಮವಹಿಸಿ ಕಾರ್ಖಾನೆ ಪ್ರಗತಿಗೆ ಸಹಕರಿಸಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪ್ರಸಕ್ತ ಗರಿಷ್ಠ 300 ಕಾರ್ಮಿಕರಿಗಷ್ಟೇ ಉದ್ಯೋಗವಿದ್ದು, ಹೆಚ್ಚುವರಿ ಯಂತ್ರೋಪಕರಣ ಅಳವಡಿಸಲು ಸೌಲಭ್ಯಗಳ ಕೊರತೆಯಿದೆ. ತಾಲ್ಲೂಕಿನಲ್ಲಿರುವ ಸರ್ಕಾರಿ ಜಮೀನು ಗುರುತಿಸಿ ವಿಶಾಲ ಭೂಮಿಯಲ್ಲಿ ಮತ್ತೊಂದು ಬೃಹತ್ ರೇಷ್ಮೆ ಕಾರ್ಖಾನೆ ಸ್ಥಾಪಿಸಿ ಈ ಭಾಗದ ಜನರಿಗೆ ಉದ್ಯೋಗ ಅವಕಾಶ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೆಲಸ ಮಾಡಿದರೆ ನಾಲ್ವಡಿ ಅವರನ್ನು ಸ್ಮರಿಸುವಂತೆ ಮುಂದೊಂದು ಸಿದ್ದರಾಮಯ್ಯ ಅವರನ್ನೂ ನೆನೆಯುತ್ತಾರೆ’ ಎಂದು ಅಭಿಪ್ರಾಯಪಟ್ಟರು.
‘ಹೋರಾಟ ರಾಜಕೀಯ ಸ್ವರೂಪ ಪಡೆಯದೇ ಕಾರ್ಮಿಕರು, ಕಾರ್ಖಾನೆ ಉಳಿವಿಗಾಗಿರಬೇಕು. ಕಾರ್ಮಿಕರ ರಕ್ಷಣೆಯ ವಿಷಯದಲ್ಲಿ ಎಲ್ಲ ಪಕ್ಷಗಳು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈಲ್ವೆ, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿರುವುದರಿಂದ ಮೀಸಲಾತಿ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಸಾಮಾಜಿಕ ನ್ಯಾಯ ವ್ಯವಸ್ಥೆ ಹದಗೆಡುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ಹೊರಗುತ್ತಿಗೆಯಲ್ಲಿ ಮೀಸಲಾತಿ ನಿಯಮಗಳು ಜಾರಿಯಾಗುತ್ತಿಲ್ಲ. ಅಧಿಕಾರದಲ್ಲಿರುವ ಪಕ್ಷದವರಿಗೆ ಉದ್ಯೋಗ ಸಿಗುವ ಪ್ರವೃತ್ತಿ ನಿಲ್ಲಬೇಕು. ಕಾರ್ಮಿಕರ ಹೊರಗುತ್ತಿಗೆ ಪದ್ಧತಿ ಸ್ಥಗಿತಗೊಳಿಸಿ ನೇರ ನೇಮಕಾತಿ ಮೂಲಕ ಕಾರ್ಮಿಕರಿಗೆ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಕೆ.ಎಂ. ಅಶೋಕ್, ಆಲತ್ತೂರು ಶಿವರಾಜು, ತಾಲ್ಲೂಕು ಸಂಚಾಲಕ ಶಿವಪ್ರಕಾಶ್, ಸಂಘಟನಾ ಸಂಚಾಲಕ ಆಲಗೂಡು ನಿಂಗರಾಜು, ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಹುಂಡಿ ನಾಗೇಶ್, ಹೆಳವರ ಹುಂಡಿ ನಾಗೇಂದ್ರ, ನಿಂಗರಾಜು, ಹನುಮನಾಳು ಮಹಾದೇವ ಹಾಜರಿದ್ದರು.