ADVERTISEMENT

ಕ್ಯಾಪ್ಟನ್‌ ಅರ್ಜುನನೇ ಹೆಚ್ಚು ಭಾರ

ಗಜಪಡೆ ತೂಕ: ಆನೆಗಳಿಗೆ ನಿತ್ಯ ಪೌಷ್ಟಿಕಾಂಶ ಆಹಾರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 15:11 IST
Last Updated 28 ಆಗಸ್ಟ್ 2019, 15:11 IST
ನನ್ನ ತೂಕ ಎಷ್ಟು ಗೊತ್ತಾ ಎಂದು ಅರ್ಜುನ ಆನೆಯು ಕೇಳಿದಂತಿದೆ...(ಎಡಚಿತ್ರ). ವೇಬ್ರಿಡ್ಜ್‌ನತ್ತ... ಅರ್ಜುನ ನೇತೃತ್ವದಲ್ಲಿ ಮೈಸೂರು ನಗರದ ಬೀದಿಗಳಲ್ಲಿ ಹೆಜ್ಜೆ ಇಟ್ಟು ಬಂದ ದಸರಾ ಗಜಪಡೆ
ನನ್ನ ತೂಕ ಎಷ್ಟು ಗೊತ್ತಾ ಎಂದು ಅರ್ಜುನ ಆನೆಯು ಕೇಳಿದಂತಿದೆ...(ಎಡಚಿತ್ರ). ವೇಬ್ರಿಡ್ಜ್‌ನತ್ತ... ಅರ್ಜುನ ನೇತೃತ್ವದಲ್ಲಿ ಮೈಸೂರು ನಗರದ ಬೀದಿಗಳಲ್ಲಿ ಹೆಜ್ಜೆ ಇಟ್ಟು ಬಂದ ದಸರಾ ಗಜಪಡೆ   

ಮೈಸೂರು: ವಿಶ್ವಪ್ರಸಿದ್ಧ ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆ ಈ ಬಾರಿಯೂ ಬಲಾಢ್ಯನಾಗಿ ಹೊರಹೊಮ್ಮಿದೆ.

ಎಂಟನೇ ಬಾರಿ ಜಂಬೂಸವಾರಿ ನೇತೃತ್ವ ವಹಿಸಲು ಕಾತರದಿಂದ ಇರುವ ಈ ಸಲಗವು ವರ್ಷದಿಂದ ವರ್ಷಕ್ಕೆ ತೂಕ ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಬಾರಿ ಬರೋಬ್ಬರಿ 5,800 ಕೆ.ಜಿ ಭಾರವಿದೆ. ಕಳೆದ ವರ್ಷಕ್ಕಿಂತ 150 ಕೆ.ಜಿ ತೂಕ ಹೆಚ್ಚಿಸಿಕೊಂಡಿದೆ. 2018ರ ದಸರೆಗೆ ಬಂದಾಗ 5,650 ಕೆ.ಜಿ. ಭಾರ ಇತ್ತು.

ಜಂಬೂಸವಾರಿಯಲ್ಲಿ ಪಾಲ್ಗೊಳ್ಳ ಲಿರುವ ಆನೆಗಳ ತೂಕ ಪರೀಕ್ಷೆಯನ್ನು ಧನ್ವಂತ್ರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್‌ ವೇಬ್ರಿಡ್ಜ್‌ನಲ್ಲಿ ಮಂಗಳವಾರ ನಡೆಸಲಾಯಿತು. ಧನಂಜಯ, ವರಲಕ್ಷ್ಮಿ ಆನೆ ತೂಕವೂ ಹೆಚ್ಚಾಗಿದೆ. ಈಶ್ವರ ಆನೆಯು ಮೊದಲ ಬಾರಿ ಬಂದಿದೆ.

ADVERTISEMENT

ನಿಗಾ ಇಡಲು ತೂಕ: ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು, ಅವುಗಳ ಆರೈಕೆಗೆ ಮಾನದಂಡ ತಿಳಿದುಕೊಳ್ಳಲು, ಸಮರ್ಪಕ ಆಹಾರ ಪೂರೈಕೆ ಮಾಡಲು ಪ್ರತಿ ಬಾರಿ ತೂಕ ಮಾಡುವುದು ವಾಡಿಕೆ. ಜಂಬೂಸವಾರಿಗೆ ಎರಡು ದಿನ ಬಾಕಿ ಇರುವಾಗ ಮತ್ತೊಮ್ಮೆ ತೂಕ ಮಾಡಿಸಿ ಎಷ್ಟು ಪೌಷ್ಟಿಕಾಂಶ ಆಹಾರ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ದಸರಾ ಮುಗಿದ ನಂತರವೂ ಆನೆಗಳನ್ನು ತೂಕಕ್ಕೆ ಒಳಪಡಿಸಲಾಗುತ್ತದೆ.

ದಸರಾ ಆನೆಗಳಿಗೆ ಜಂಬೂಸವಾರಿ ತಾಲೀಮು ಸಂಜೆಯಿಂದಲೇ ಆರಂಭವಾಯಿತು. ಈ ಆನೆಗಳಿಗೆ ಮಂಗಳವಾರದಿಂದಲೇ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಹೆಸರು ಕಾಳು, ಉದ್ದಿನ ಕಾಳು, ಕುಸಬಲಕ್ಕಿ, ಗೋಧಿ ಸೇರಿದಂತೆ ವಿವಿಧ ಆಹಾರವನ್ನು ಪ್ರತಿದಿನ ಬೆಳಿಗ್ಗೆ ತಾಲೀಮಿಗೂ ಮುನ್ನ ಮತ್ತು ಸಂಜೆ ತಾಲೀಮು ಮುಗಿಸಿಕೊಂಡು ಬಂದ ನಂತರ ನೀಡಲಾಗುತ್ತದೆ.

ಜೊತೆಗೆ ಭತ್ತದ ಹುಲ್ಲಿನೊಂದಿಗೆ ತೆಂಗಿನಕಾಯಿ, ಬೆಲ್ಲ, ಬೆಣ್ಣೆ ಸೇರಿಸಿ ವಿಶೇಷ ಆಹಾರ ನೀಡಲಾಗುವುದು. ಈ ಮೂಲಕ ಆನೆಗಳ ತೂಕ ಹೆಚ್ಚಿಸಲಾಗುವುದು. ಅರ್ಜುನ ಆನೆಯು ಚಿನ್ನದ ಅಂಬಾರಿ ಹೊರಲು ಈ‌ ವರ್ಷವೂ ಸಮರ್ಥವಾಗಿದೆ ಎಂದು ಪಶುವೈದ್ಯ ಡಾ.ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.