ಮೈಸೂರು: ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ 64ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ವಿದ್ವಾನ್ ವಿಠ್ಠಲ ರಾಮಮೂರ್ತಿ ಮತ್ತು ವಿದುಷಿ ಪದ್ಮಾ ಶಂಕರ್ ದ್ವಂದ್ವ ವಯಲಿನ್ ವಾದನವು ಸಹೃದಯರನ್ನು ಮೋಡಿ ಮಾಡಿತು.
‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಲಾಗಿರುವ ಸಂಗೀತೋತ್ಸವದ 7ನೇ ದಿನವಾದ ಮಂಗಳವಾರ ಸಂಗೀತ ಕಛೇರಿಯು ಭಾವ ತನ್ಮಯಗೊಳಿಸಿತು.
ಇಬ್ಬರೂ ಮನೋಧರ್ಮದಲ್ಲಿ ರಾಗಗಳನ್ನು ವಿಸ್ತರಿಸುತ್ತಿದ್ದರೆ, ಭಾವಾನುಭೂತಿಯಲ್ಲಿ ಮಿಂದ ಕೇಳುಗರು ತಲೆದೂಗಿದರು. ವಿದ್ವಾನ್ ಬೆಂಗಳೂರು ಪ್ರವೀಣ್ ಅವರ ‘ಮೃದಂಗ’ವು ಹೃದಯದ ಧಿಮಿತ ಹೆಚ್ಚಿಸಿದರೆ, ವಿದ್ವಾನ್ ಭಾರದ್ವಾಜ್ ಆರ್.ಸಾತವಲ್ಲಿ ಅವರ ‘ಮೋರ್ಚಿಂಗ್’ ವಾದನವು ಗುನುಗುನಿಸಿತು.
ಲಾಲ್ಗುಡಿ ಜಯರಾಮನ್ ಅವರ ‘ಗರುಡಧ್ವನಿ’ ರಾಗದ ವರ್ಣ ನುಡಿಸುವ ಮೂಲಕ ಕಛೇರಿ ಆರಂಭಿಸಿ, ಮುತ್ತುಸ್ವಾಮಿ ದೀಕ್ಷಿತರ ‘ಗೌಳ’ ರಾಗದ ‘ಶ್ರೀ ಮಹಾಗಣಪತಿರವತುಮಾಮ್’, ‘ದ್ವಿಜವಂತಿ’ ರಾಗದ ‘ಅಖಿಲಾಂಡೇಶ್ವರಿ’, ತ್ಯಾಗರಾಜರ ‘ಕನ್ನಡ ಗೌಳ’ ರಾಗದ ‘ಊರಜುಪು’, ‘ಜಗನ್ಮೋಹಿನಿ’ ರಾಗದ ‘ಶೋಬಿಲ್ಲು ಸಪ್ತಸ್ವರ’, ‘ಬಿಂದುಮಾಲಿನಿ’ ರಾಗದ ‘ಎಂತ ಮುದ್ದೊ, ಎಂತ ಸೊಗಸೊ’ ಕೃತಿಗಳನ್ನು ಪ್ರಸ್ತುತ ಪಡಿಸಿದರು.
ಮೈಸೂರು ವಾಸುದೇವಾಚಾರ್ಯರ ‘ಧರ್ಮಾವತಿ’ ರಾಗದ ಕೃತಿ ‘ಭಜನಸೇಯರಾಧ’, ವಿ.ಆರ್.ಗೋಪಾಲ ಅಯ್ಯರ್ ಅವರ ‘ಮೋಹನ ಕಲ್ಯಾಣಿ’ ರಾಗದ ‘ತಮದಂ’, ತ್ಯಾಗರಾಜರ ‘ಖರಹರಪ್ರಿಯ’ ರಾಗದ ‘ಚಕ್ಕನಿ ರಾಜಮಾರ್ಗಮು’, ಭಾರತೀಯಾರ್‌ರ ‘ರಾಗಮಾಲಿಕಾ’ ರಾಗದ ‘ತೀರಾದ’, ‘ಮಾನಸ ಸಂಚರರೇ’ ನುಡಿಸಿದರು.
‘ಕಾಪಿ’ ರಾಗದ ಪುರಂದರದಾಸರ ಕೀರ್ತನೆ ‘ಜಗದೋದ್ಧಾರನ’ ನುಡಿಸಿದ ವಾದ್ಯ ಜೋಡಿಯು ಭಕ್ತಿರಸದಲ್ಲಿ ಕೇಳುಗರನ್ನು ತೇಲಿಸಿತು. ವಾತ್ಸಲ್ಯ– ಕಾರುಣ್ಯ ಭಾವ ಮೂಡಿತ್ತು. ‘ಮಧ್ಯಮಾವತಿ’ ರಾಗದ ಅವರದೇ ಕೀರ್ತನೆ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಪ್ರಸ್ತುತಪಡಿಸಿದರು. ಲಾಲ್ಗುಡಿ ಜಯರಾಮನ್ ಅವರ ತಿಲ್ಲಾನದಲ್ಲಿ ‘ಮಧುವಂತಿ’ ದೇಶ್’, ‘ಸಿಂಧೂಭೈರವಿ’ ರಾಗಗಳನ್ನು ನಲಿಸಿದರು.
ಇದಕ್ಕೂ ಮೊದಲು ವಿದ್ವಾನ್ ಮಂಜುನಾಥ ‘ಕೌಶಿಕ ರಾಮಾಯಣ– ಭರತ ಪಾದುಕೆ’ ಕಾವ್ಯದ ಗಮಕ ವಾಚನ ಮಾಡಿದರು. ರಾಮಶೇಷನ್ ವ್ಯಾಖ್ಯಾನ ನೀಡಿದರು.
ಇಂದು ಬೆಂಗಳೂರು ಸೋದರರ ಗಾಯನ:
ಬುಧವಾರ (ಸೆ.3) ಸಂಜೆ 6.45ಕ್ಕೆ ಬೆಂಗಳೂರು ಸೋದರರಾದ ವಿದ್ವಾನ್ ಅಶೋಕ್– ಹರಿಹರನ್ ಗಾಯನ ನಡೆಸಿಕೊಡಲಿದ್ದು, ವಿಠ್ಠಲ್ ರಾಮಮೂರ್ತಿ –ವಯಲಿನ್, ಬೆಂಗಳೂರು ಪ್ರವೀಣ್– ‘ಮೃದಂಗ’ ಹಾಗೂ ವಾಜಪಲ್ಲಿ ಕೃಷ್ಣಕುಮಾರ್ – ಘಟಂನಲ್ಲಿ ಸಾಥ್ ನೀಡುವರು.
‘ಮೋರ್ಚಿಂಗ್’ನಲ್ಲಿ ಭಾರದ್ವಾಜ್ ಆರ್.ಸಾತವಲ್ಲಿ | ಮೃದಂಗದಲ್ಲಿ ಬೆಂಗಳೂರು ಪ್ರವೀಣ್ ಸಾಥ್ |ಬೆಂಗಳೂರು ಸೋದರರ ಗಾಯನ ಇಂದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.