ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಅನಾರೋಗ್ಯ ಪೀಡಿತ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿ, ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
‘ದೈಹಿಕ ನ್ಯೂನತೆಯುಳ್ಳ, ಅನಾರೋಗ್ಯ ಮತ್ತು ವಯಸ್ಸಾದ ಶಿಕ್ಷಕರಿಗೆ ದೂರದ ಊರಿಗೆ ಸಮೀಕ್ಷೆಗೆ ಹೋಗಲು ತೊಂದರೆಯಾಗುತ್ತಿದೆ. ಅನಾರೋಗ್ಯವುಳ್ಳವರು ವೈದ್ಯಕೀಯ ಪ್ರಮಾಣ ಪತ್ರ ನೀಡಿದರೂ, ಸರ್ಕಾರ ವಿನಾಯತಿ ನೀಡುತ್ತಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿರುವ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಹೇಳುತ್ತಿರುವುದು ಖಂಡನೀಯ. ಇದು ಸರ್ವಾಧಿಕಾರಿ ಧೋರಣೆಯಾಗಿದೆ’ ಎಂದು ದೂರಿದರು.
‘ರಾಜ್ಯ ಸರ್ಕಾರ ಕೂಡಲೇ ಶಿಕ್ಷಕರ ಸಮಸ್ಯೆ ಆಲಿಸಿ, ಆನ್‌ಲೈನ್ ಆ್ಯಪ್ ಬದಲು, ಬುಕ್‌ಲೆಟ್ ಅಥವಾ ಮ್ಯಾನುವಲ್ ಅಪ್ಲಿಕೇಶನ್‌ನಲ್ಲಿ ಗಣತಿ ಮಾಡಬೇಕು. ಅನಾರೋಗ್ಯದಿಂದ ಬಳಲುತ್ತಿರುವವರು ಸಮೀಕ್ಷೆಯಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.
‘ಸಮೀಕ್ಷೆಗೆ ಸರ್ಕಾರ ಮನೆಗಳ ಪಟ್ಟಿಗಳನ್ನು ಶಿಕ್ಷಕರಿಗೆ ಸರಿಯಾಗಿ ನೀಡದೆ ತೊಂದರೆ ಉಂಟಾಗಿದೆ. ಮನೆ ಮುಂದೆ ಹಿಂದುಳಿದ ವರ್ಗಗಳ ಆಯೋಗದಿಂದ ಅಂಟಿಸಿರುವ ಯುಎಚ್ಐಡಿ ಐಡಿ ನಂಬರ್, ಹಳ್ಳಿಗಳಲ್ಲಿ ಬೇರೆ ಬೇರೆ ಜಾಗಗಳಲ್ಲಿ ತೋರಿಸುತ್ತಿದೆ. ಇನ್ನೂ ತಾಂತ್ರಿಕ ಸಮಸ್ಯೆಯಿಂದ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿಲ್ಲ. ಇದರ ಜೊತೆಗೆ ಸಮೀಕ್ಷೆಗೆ 60 ಪ್ರಶ್ನೆಗಳನ್ನು ಸರ್ಕಾರ ಕೇಳಿರುವುದು ಸರಿಯಲ್ಲ’ ಎಂದರು.
ಪ್ರತಿಭಟನೆ ನೇತೃತ್ವವನ್ನು ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಗೋಲ್ಡನ್ ಸುರೇಶ್, ಪ್ರಜೀಶ್, ಪ್ರಭುಶಂಕರ, ಕೃಷ್ಣಪ್ಪ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ ನೇಹಾ, ಭಾಗ್ಯಮ್ಮ, ಕೃಷ್ಣೆಗೌಡ, ಹೊನ್ನೇಗೌಡ, ಹನುಮಂತಯ್ಯ, ತಾಯೂರು ಗಣೇಶ್, ಎಳನೀರು ರಾಮಣ್ಣ, ಬಸವರಾಜು, ಕುಮಾರ್ ಗೌಡ, ಸುನೀಲ್ ಅಗರವಾಲ್, ಆನಂದ್ ಗೌಡ, ಶಾಂತರಾಜೇ ಅರಸ್, ರಾಧಾಕೃಷ್ಣ, ರಾಜುಗೌಡ, ರಘು ಅರಸ್, ಮೂರ್ತಿ ಲಿಂಗಯ್ಯ, ಗಣೇಶ್ ಪ್ರಸಾದ್, ದರ್ಶನ್ ಗೌಡ, ರವಿ ನಾಯಕ್, ರವೀಶ್, ಮಹಾದೇವಸ್ವಾಮಿ, ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.