ಮೈಸೂರು: ಪ್ರಸಾದ್ ಯೋಜನೆಯಡಿ ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವಿರೋಧಿಸಿ ಮಂಡ್ಯ ರಕ್ಷಣಾ ವೇದಿಕೆ ಸದಸ್ಯರು ಚಾಮುಂಡಿಬೆಟ್ಟದ ದೇವಸ್ಥಾನದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
‘ಪ್ರಸಾದ್ ಯೋಜನೆಯಡಿ ಚಾಮುಂಡಿಬೆಟ್ಟದ ಒಡಲು ಸೀಳಲು ಯತ್ನಿಸಲಾಗುತ್ತಿದೆ. ಸುಮಾರು ₹ 60 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಯೋಜನೆ ಜನಾಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಏಳು ಕೋಟಿ ಕನ್ನಡಿಗರು ಹಾಗೂ ಚಾಮುಂಡೇಶ್ವರಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಇದರಿಂದ ಸರ್ಕಾರಕ್ಕೂ ಕೆಟ್ಟ ಹೆಸರು ಬರಲಿದ್ದು, ಪ್ರಕೃತಿಯ ಒಡಲನ್ನು ಸೀಳಲು ಮುಂದಾಗಿರುವುದು ಖಂಡನೀಯ. ಕಾಮಗಾರಿಯಿಂದ ದೇವಸ್ಥಾನದ ಗೋಪುರಕ್ಕೂ ಹಾನಿಯಾಗುವ ಸಾಧ್ಯತೆಯಿದೆ’ ಎಂದು ಪ್ರತಿಭಟನಕಾರರು ಆತಂಕ ವ್ಯಕ್ತಪಡಿಸಿದರು.
‘ಕಾಮಗಾರಿಯಿಂದ ಚಾಮುಂಡಿಬೆಟ್ಟದ ನೈಜತೆ ಹಾಳಾಗುತ್ತಿದೆ. ಪರಿಸರಕ್ಕೂ ಹಾನಿಯಾಗುತ್ತಿದೆ. ಈ ಹಿಂದೆ ಬೆಟ್ಟದ ರಸ್ತೆ ಕುಸಿದಿದ್ದು, ಅದನ್ನೇ ಸರಿಪಡಿಸಲು ಆಗಿಲ್ಲ. ಹೀಗಿರುವಾಗ ಮತ್ತೊಂದು ಕಾಮಗಾರಿ ನಡೆಸಲು ಮುಂದಾಗಿರುವುದು ಸರಿಯಲ್ಲ. ಕೂಡಲೇ ಕಾಮಗಾರಿ ಕೈಬಿಟ್ಟು, ಚಾಮುಂಡಿ ಬೆಟ್ಟದ ಪಾವಿತ್ರ್ಯತೆ, ಪರಿಸರ ಉಳಿಸಬೇಕು’ ಎಂದು ಒತ್ತಾಯಿಸಿದರು.
ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ್ ಬಾಬು, ಸುನೀಲ್, ಲೋಕೇಶ್, ಕೆಂಪನಾಯ್ಕ, ಅಭಿಷೇಕ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.