ADVERTISEMENT

ಹುಲಿ ದಾಳಿಗೆ ಬಾಲಕ ಸಾವು; ಬಹಿರ್ದೆಸೆಗಾಗಿ ಕಾಡಿಗೆ ತೆರಳಿದ್ದ ಗಣೇಶ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 13:03 IST
Last Updated 8 ಸೆಪ್ಟೆಂಬರ್ 2021, 13:03 IST
ಗಣೇಶ್
ಗಣೇಶ್   

ಹುಣಸೂರು: ನಾಗರಹೊಳೆ ಅರಣ್ಯದ ವೀರನಹೊಸಹಳ್ಳಿ ವಲಯಕ್ಕೆ ಹೊಂದಿಕೊಂಡಿರುವ ಐಯ್ಯನಕೆರೆ ಹಾಡಿಯ ನಿವಾಸಿ ಗಣೇಶ್ (13) ಹುಲಿ ದಾಳಿಗೆ ಬುಧವಾರ ಮೃತಪಟ್ಟಿದ್ದಾನೆ.

ಲಕ್ಷ್ಮಿ ಮತ್ತು ಕರಿಯಯ್ಯ ಅವರ ಪುತ್ರ ಗಣೇಶ್ ಬಹಿರ್ದೆಸೆಗೆಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ 100 ಮೀಟರ್ ದೂರಕ್ಕೆ ತೆರಳಿದ್ದ. ಎಷ್ಟು ಹೊತ್ತಾದರೂ ಮನೆಗೆ ಬಂದಿರಲಿಲ್ಲ. ಕುಟುಂಬದ ಸದಸ್ಯರು ಹುಡುಕಾಟ ನಡೆಸಿದ್ದು, ಸಮೀಪದಲ್ಲೇ ಶವ ಪತ್ತೆಯಾಗಿದೆ.

ಹುಲಿ ಓಡಾಡಿರುವ ಹೆಜ್ಜೆ ಗುರುತುಗಳು ಇತ್ತೀಚೆಗೆ ಕಂಡುಬಂದಿದ್ದವು. ಇದೇ ಹುಲಿ ಬಾಲಕನ ಮೇಲೆ ದಾಳಿ ಮಾಡಿರಬಹುದು ಎಂದು ಹಾಡಿ ನಿವಾಸಿಗಳು ಶಂಕಿಸಿದ್ದಾರೆ.

ಎರಡನೇ ಘಟನೆ: ಹುಲಿ ದಾಳಿಗೆ ಇದು ಎರಡನೇ ಬಲಿಯಾಗಿದ್ದು, ಕಳೆದ 6 ತಿಂಗಳ ಹಿಂದೆ ನೇರಳಕುಪ್ಪೆ ಹಾಡಿ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ವ್ಯಕ್ತಿ ಮೃತಪಟ್ಟಿದ್ದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್, ‘ಇಲಾಖೆ ನಿಯಮಾನುಸಾರ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.

ವಲಯ ಅರಣ್ಯಾಧಿಕಾರಿ ಹನುಮಂತು, ಸಹಾಯಕ ವಲಯ ಅರಣ್ಯಾಧಿಕಾರಿ ಸಿದ್ದರಾಜು, ವೀರಭದ್ರಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.