
ಮೈಸೂರು: ‘ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಬೇಕು’ ಎಂದು ರಂಗಕರ್ಮಿ ಮೈಮ್ ರಮೇಶ್ ಹೇಳಿದರು.
ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆ, ಮನರಂಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಸ್ಕಾರ-ಸಂಸ್ಕೃತಿ ನಮ್ಮ ಜೀವನದ ಮೌಲ್ಯಗಳು. ಉತ್ತಮ ಜೀವನ ನಡೆಸಲು ಇವು ಮುಖ್ಯ. ಆದರೆ, ಈಗಿನ ಮಕ್ಕಳು ಇವೆರಡನ್ನೂ ಕಳೆದುಕೊಂಡಿದ್ದಾರೆ. ಇದಕ್ಕೆ ಪೋಷಕರು ಮತ್ತು ಶಿಕ್ಷಕರು ಹೊಣೆ’ ಎಂದು ತಿಳಿಸಿದರು.
‘ಮುಂದಿನ ದೇಶದ ಭವಿಷ್ಯಕ್ಕೆ ಇಂದಿನ ಮಕ್ಕಳೆ ಆಸ್ತಿ. ಅವರನ್ನು ಉತ್ತಮ ಪ್ರಜೆಯಾಗಿ ರೂಪುಗೊಳಿಸಬೇಕು. ರಂಗಕರ್ಮಿಯಾಗಿ ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ ಬೆರೆತು ಜೀವನ ಕಳೆದಿದ್ದೇನೆ. ಮುಂದೆಯೂ ರಂಗಭೂಮಿ ಕಾಯಕ ನಿರಂತರವಾಗಿ ಮುಂದುವರಿಸುವೆ’ ಎಂದರು.
ಗಮನ ಕೊಡಬೇಕು:
ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ‘ಮಕ್ಕಳ ಮನಸು ತುಂಬಾ ಸೂಕ್ಷ್ಮವಾದುದು. ಪರಿಸರ ಮತ್ತು ಅವರ ಸುತ್ತಲಿನ ಪ್ರಚೋದಕಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ. ಕುತೂಹಲಕಾರಿ ಮನೋಭಾವ ಹೊಂದಿರುತ್ತಾರೆ. ಪೋಷಕರು ಮಕ್ಕಳ ಕಡೆಗೆ ಸಾಕಷ್ಟು ಗಮನ ನೀಡಬೇಕು’ ಎಂದು ಸಲಹೆ ನೀಡಿದರು.
‘ಇಂದು ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚುತ್ತಿದ್ದು, ಕಳವಳಕಾರಿ ಸಂಗತಿ ಇದಾಗಿದೆ. ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮ ಅರಿತು ಪೋಷಕರು ಮಕ್ಕಳ ಎದುರು ಮೊಬೈಲ್ ಫೋನ್ ಬಳಸುವುದು ಮತ್ತು ನೋಡುವುದನ್ನು ಕಡಿಮೆ ಮಾಡಬೇಕು. ಅವರಲ್ಲಿ ಪುಸ್ತಕ ಓದುವ ಉತ್ತಮ ಹವ್ಯಾಸ ರೂಢಿಸಬೇಕು’ ಎಂದರು.
ಶಿಕ್ಷಣ ಕೊಡಿಸಬೇಕು:
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ‘ದೇಶದ ಮೊದಲ ಪ್ರಧಾನಿ ನೆಹರೂ ಅವರಿಗಿದ್ದ ಮಕ್ಕಳ ಮೇಲಿನ ಅಳವಾದ ಪ್ರೀತಿ ಮನಗಂಡು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಮಕ್ಕಳ ದಿನಾಚರಣೆಯಂದು ಅವರನ್ನು ಹೊರಗಡೆಗೆ ಕರೆದುಕೊಂಡು ಬಂದು ಸುತ್ತಾಡಿಸಿ ಕರೆದುಕೊಂಡು ಹೋಗುವ ಉದ್ದೇಶ ಆಗಬಾರದು. ಬದಲಿಗೆ ಅರ್ಥಪೂರ್ಣ ಆಚರಣೆಗೆ ಸಂಕಲ್ಪ ಮಾಡಿ ಈ ದಿನ ವಿಭಿನ್ನವಾಗಿ ವೇದಿಕೆ ಒದಗಿಸಲಾಗಿದೆ. ಮಕ್ಕಳಿಗೆ ವಿವಿಧ ಸ್ಪರ್ಧೆ, ಮನರಂಜನೆ ಆಯೋಜಿಸಿದೆ. ಮಕ್ಕಳು ದೇಶದ ಭವಿಷ್ಯ ರೂಪಿಸುವ ರೂವಾರಿಗಳು. ಅವರನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕು. ವಿದ್ಯೆ, ಬುದ್ಧಿಯೊಂದಿಗೆ ಶಕ್ತಿವಂತರನ್ನಾಗಿಸಿದರೆ ದೇಶವೂ ಬಲಿಷ್ಠವಾಗುತ್ತದೆ’ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಉಪನಿರ್ದೇಶಕ ಲಿಂಗರಾಜು, ಮಹಾರಾಣಿ ಕಾಲೇಜು ವಿಜ್ಞಾನ ವಿಭಾಗದ ಪ್ರೊ.ಕಾವೇರಿ, ಡಾ.ರೇಖಾ ಅರುಣ್, ಎನ್.ಆರ್.ನಾಗೇಶ್ ಭಾಗವಹಿಸಿದ್ದರು.
ಇದಕ್ಕೂ ಮುನ್ನ, ಮಕ್ಕಳೊಂದಿಗೆ ಗಣ್ಯರು ನೃತ್ಯ ಮಾಡಿದರು. ಮಕ್ಕಳೂ ಕುಣಿದು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.