ಮೈಸೂರು: ‘ರಿಂಗ್ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ತುಂಬುತ್ತಿದೆ. ಸೀವೇಜ್ ಫಾರಂನ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ನಗರದ ಹೃದಯ ಭಾಗದಲ್ಲಿಯೇ ಕಸ ನಿರ್ವಹಣೆ ನಡೆಯುತ್ತಿಲ್ಲ. ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ. ಸಂಘಟಿತರಾಗಿ ಸ್ವಚ್ಛನಗರಿ ಪಟ್ಟ ಮತ್ತೆ ತರಲು ಹೆಚ್ಚು ಶ್ರಮಿಸಬೇಕಿದೆ’
ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ವಚ್ಛ ಸರ್ವೇಕ್ಷಣೆ ಅಭಿಯಾನ’ ಕುರಿತು ನಡೆದ ಸಭೆಯಲ್ಲಿ ಮಾಜಿ ಮೇಯರ್‌ಗಳು ಆಡಿದ ಮಾತುಗಳಿವು. ದೂರುಗಳನ್ನು ಹೇಳಿದ ಅವರು, ಸಲಹೆಗಳನ್ನೂ ನೀಡಿದರು.
‘ಸ್ವಚ್ಛ ಸರ್ವೇಕ್ಷಣೆ ದೇಶದಾದ್ಯಂತ ಫೆ.15ರಿಂದ ಮೇ 25ರವರೆಗೆ ನಡೆಯಲಿದ್ದು, ನಗರಕ್ಕೆ ಯಾವಾಗ ಬೇಕಾದರೂ ಕೇಂದ್ರ ಸರ್ಕಾರದ ಅಧಿಕಾರಿಗಳು ಬರಬಹುದು. ಹೀಗಾಗಿ, ಯೋಜಿತವಾಗಿ ಕೆಲಸ ಮಾಡಬೇಕಿದೆ. ಮಾಜಿ ಮೇಯರ್‌ಗಳು ಸಲಹೆ ನೀಡಬೇಕು. ಅದನ್ನು ಪಾಲಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಕೋರಿದರು.
ನನ್ನ ಅವಧಿಯಲ್ಲಿ ನಂ.1: ‘ನಾನು ಮೇಯರ್ ಆಗಿದ್ದಾಗ ಸ್ವಚ್ಛ ನಗರಿ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿತ್ತು. ಎರಡು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಕಟ್ಟಡ ತ್ಯಾಜ್ಯವನ್ನು ಲಾರಿ ಮಾಲೀಕರ ಸಹಕಾರದಿಂದ ತೆರವುಗೊಳಿಸಲಾಗುತ್ತಿತ್ತು. ಈಗ ಅದಿಲ್ಲ. ಫ್ಲೆಕ್ಸ್‌ಗಳ ಹಾವಳಿಯು ಹೆಚ್ಚಾಗಿದ್ದು, ಕಡಿವಾಣ ಹಾಕಬೇಕು’ ಎಂದು ಆರ್.ಲಿಂಗಪ್ಪ ಹೇಳಿದರು.
ನಾರಾಯಣ ಮಾತನಾಡಿ, ‘ಸಂಘಟಿತ ಪ್ರಯತ್ನದಿಂದ ಪ್ರಶಸ್ತಿ ಪಡೆದಿತ್ತು. ಆದರೆ, ಪ್ರಸ್ತುತ ಆ ಕಾರ್ಯ ನಡೆಯುತ್ತಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕಿದೆ’ ಎಂದರೆ, ಮೋದಾಮಣಿ, ‘ನಗರದ ರಸ್ತೆ ಬದಿಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದು, ನಗರ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ’ ಎಂದರು.
ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮಾತನಾಡಿ, ‘ರಿಂಗ್ ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡ ತ್ಯಾಜ್ಯ ಸರಿಯಲಾಗುತ್ತಿದೆ. ಬಡಾವಣೆ ನಿರ್ಮಾಣ ಮಾಡಿರುವ ಖಾಸಗಿಯವರಿಂದ ಪಾಲಿಕೆಗೆ ಹಸ್ತಾಂತರ ಆಗುವ ಮೊದಲು ಮೂಲಸೌಲಭ್ಯ ಕಲ್ಪಿಸಬೇಕು. ಉದ್ಯಾನಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡಬೇಕು’ ಎಂದು ಸಲಹೆ ನೀಡಿದರು.
ಬಿ.ಕೆ.ಪ್ರಕಾಶ್, ‘ಮಳೆ ನೀರು ಚರಂಡಿಗಳ ನಿರ್ವಹಣೆ ಆಗುತ್ತಿಲ್ಲ. ಒಳಚರಂಡಿಗಳ ನೀರು ಕೆರೆ ಸೇರುತ್ತಿದೆ. ಎಸ್‌ಟಿಪಿ ಪ್ಲಾಂಟ್‌ಗಳನ್ನು ಸರಿಯಾಗಿ ನಿರ್ವಹಿಸಬೇಕು. ಅದರಿಂದ ನಗರದಲ್ಲಿನ ಕೆರೆ– ಕಟ್ಟೆಗಳು ಅಳಿಯಲಿವೆ. ಮಳೆ ನೀರು ಒಳಚರಂಡಿಗೆ ಸೇರಬಾರದು. ನೇರ ರಾಜಕಾಲುವೆಗಳ ಮೂಲಕ ಕೆರೆ ಸೇರಬೇಕು. ಅಂತ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದರು.
ಸಂದೇಶ್ ಸ್ವಾಮಿ, ‘ಪಾಲಿಕೆ ಅಧಿಕಾರಿಗಳು ಪೌರಕಾರ್ಮಿಕರಿಂದ ಹೆಚ್ಚು ಕೆಲಸ ಮಾಡಿಸುತ್ತಿದ್ದಾರೆ. ಸ್ವಚ್ಛತಾ ಕಾರ್ಯಕ್ಕೆ ಮಾತ್ರ ನಿಯೋಜಿಸಬೇಕು. ಎನ್.ಆರ್.ಕ್ಷೇತ್ರದ ವಾರ್ಡ್‌ಗಳಲ್ಲಿ ಸ್ವಚ್ಛತಾ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಎಕ್ಸೆಲ್ ಪ್ಲಾಂಟ್‌ಗೆ ಬೆಂಕಿ ಬಿದ್ದಿದೆ. ತ್ಯಾಜ್ಯ ವಿಲೇವಾರಿ ಆಗಬೇಕು’ ಎಂದು ಹೇಳಿದರು.
ಹೆಚ್ಚುವರಿ ಆಯುಕ್ತೆ ಎಸ್.ಕುಸುಮಾ ಕುಮಾರಿ, ಉಪ ಆಯುಕ್ತರಾದ ಎಂ.ದಾಸೇಗೌಡ, ಜಿ.ಎಸ್.ಸೋಮಶೇಖರ್, ಕೆ.ಜೆ.ಸಿಂಧು, ಮಾಜಿ ಮೇಯರ್‌ಗಳಾದ ಶ್ರೀಕಂಠಯ್ಯ, ಅಯೂಬ್ ಖಾನ್, ಟಿ.ಬಿ.ಚಿಕ್ಕಣ್ಣ, ಎಂ.ಜೆ.ರವಿಕುಮಾರ್, ಪುರುಷೋತ್ತಮ್, ಪುಷ್ಪಾಲತಾ ಚಿಕ್ಕಣ್ಣ, ಪುಷ್ಪಾಲತಾ ಜಗನ್ನಾಥ್, ಟಿ.ಬಿ.ಚಿಕ್ಕಣ್ಣ ಪಾಲ್ಗೊಂಡಿದ್ದರು.
ಪಾಲಿಕೆ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಷ್ಟೇ ಕೆಲಸ ಮಾಡುತ್ತಿದ್ದಾರೆ. ನಾಯಿ ಸತ್ತು ಬಿದ್ದಿದ್ದರೂ ಅಧಿಕಾರಿಗಳಿಗೆ ಕರೆ ಮಾಡುವುದಿಲ್ಲ. ಸಮನ್ವಯ ಇಲ್ಲಆರೀಫ್ ಹುಸೇನ್ ಮಾಜಿ ಮೇಯರ್
ದೇವರಾಜ ಮಾರುಕಟ್ಟೆ ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಸೇರಿದಂತೆ ನಗರದ ಹೃದಯ ಭಾಗ ಸ್ವಚ್ಛಗೊಳ್ಳಬೇಕು. ಕಸದ ಬುಟ್ಟಿಗಳನ್ನು ಇಡಬೇಕುಎಂ.ಜೆ.ರವಿಕುಮಾರ್ ಮಾಜಿ ಮೇಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.