ಹದಿನಾರು (ಮೈಸೂರು ಜಿಲ್ಲೆ): ‘ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ತಲಾಆದಾಯ ಜಾಸ್ತಿಯಾಗಿದೆ. ಕೊಳ್ಳುವ ಶಕ್ತಿ ವೃದ್ಧಿಸಿದೆ. ಬಡವರ ಸಂಖ್ಯೆ ಹಾಗೂ ಅಸಮಾನತೆ ಕಡಿಮೆ ಆಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ತಾವು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಹೊರವಲಯದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ₹ 1,107.72 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು.
‘ಅಭಿವೃದ್ಧಿ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವನ್ನು ಮುಂಚೂಣಿಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ನಾನು ಎರಡು ಬಾರಿ ಮುಖ್ಯಮಂತ್ರಿ ಆಗುವುದಕ್ಕೆ ವರುಣ ಕ್ಷೇತ್ರದ ಜನರು ಕಾರಣ. ಇಲ್ಲಿನ ಎಲ್ಲರ ಋಣ ನನ್ನ ಮೇಲಿದೆ’ ಎಂದು ಸ್ಮರಿಸಿದರು.
‘ಇನ್ನೂ ಎರಡೂಮುಕ್ಕಾಲು ವರ್ಷ ನಾವು ಅಭಿವೃದ್ಧಿ ಮಾಡುತ್ತೇವೆ. ಉಳಿದ ಭರವಸೆಗಳನ್ನೂ ಈಡೇರಿಸುತ್ತೇವೆ. ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡದೆ ಮುಂದೆಯೂ ನನಗೆ ಶಕ್ತಿ ತುಂಬಬೇಕು’ ಎಂದು ಕೋರಿದರು.
ಅಧಿಕಾರಕ್ಕಾಗಿ ಹೊಗಳುತ್ತಿದ್ದಾರೆ: ‘ಬಿಜೆಪಿಯನ್ನು ಕಟುವಾಗಿ ನಿಂದಿಸುತ್ತಿದ್ದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಈಗ ಅಧಿಕಾರಕ್ಕಾಗಿ ಅದೇ ಪಕ್ಷವನ್ನು ಹಾಡಿ ಹೊಗಳುತ್ತಿದ್ದಾರೆ. ಇದು ವಿಪರ್ಯಾಸ. ಬಿಜೆಪಿ–ಜೆಡಿಎಸ್‌ನವರು ನಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ಸತ್ಯವೂ ಇಲ್ಲ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಅವರ ಮಾತಿನಲ್ಲಿ ಸತ್ಯಾಂಶವಿಲ್ಲ. ಅಸಮಾನತೆ ಹೋಗಲಾಡಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಹೇಳುವ ಬಿಜೆಪಿಯವರು, ನಮ್ಮ ಸರ್ಕಾರಿ ಕಾರ್ಯಕ್ರಮಗಳಿಗೆ ಬಂದು ನೋಡಬೇಕು. ಎಲ್ಲ ಕಡೆಯೂ ಸಾವಿರಾರು ಕೋಟಿ ರೂಪಾಯಿ ಮೊತ್ತದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಬೊಕ್ಕಸ ಖಾಲಿಯಾಗಿದ್ದರೆ ಹೀಗೆ ಮಾಡಲು ಆಗುತ್ತದೆಯೇ? ಬಿಜೆಪಿಯವರು ಜನರನ್ನು ತಪ್ಪು ದಾರಿಗೆ ಎಳೆಯುವ ಯತ್ನ ಮಾಡುತ್ತಿದ್ದಾರೆ’ ಎಂದರು.
ಬಿಜೆಪಿಗೆ ಅಧಿಕಾರದ ದಾಹ: ‘ಕೇಂದ್ರ ಸರ್ಕಾರ ನಮಗೆ ಸಂಪೂರ್ಣವಾಗಿ ಸಹಕರಿಸುತ್ತಿಲ್ಲ. ನಮ್ಮ ಪಾಲಿನ ಅನುದಾನ, ತೆರಿಗೆ ಪಾಲು ಕೊಡುತ್ತಿಲ್ಲ. ಬಿಜೆಪಿಯವರಿಗೆ ಅಧಿಕಾರದ ದಾಹ. ಇದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿರುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.
ಇತಿಹಾಸಕಾರ ಪಿ.ವಿ. ನಂಜರಾಜ ಅರಸು ವಿರಚಿತ ‘ಹದಿನಾರು ಇತಿಹಾಸ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಹದಿನಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಣ್ಣತಾಯಮ್ಮ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖಂಡ ಎಸ್.ಸಿ. ಬಸವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್, ‘ಸೆಸ್ಕ್’ ಎಂಡಿ ಮುನಿಗೋಪಾಲರಾಜು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ವರುಣಕ್ಕೆ ಈವರೆಗೆ ₹ 4500 ಕೋಟಿ ಅನುದಾನ’
‘ನಮ್ಮ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ಬಿಜೆಪಿಯವರು ಸತ್ವರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಅಭಿವೃದ್ಧಿಗೂ ಹಣವನ್ನು ಮುಖ್ಯಮಂತ್ರಿ ಕೊಡುತ್ತಿದ್ದು ಎಲ್ಲವನ್ನೂ ನಾಜೂಕಾಗಿ ನಿಭಾಯಿಸುತ್ತಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಪಾದಿಸಿದರು. ‘ಮತಕಳ್ಳತನಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೇಳಿದ ಮಾಹಿತಿಯನ್ನು ಚುನಾವಣಾ ಆಯೋಗ ಕೊಡುತ್ತಿಲ್ಲ ಆರೋಪ ತಳ್ಳಿ ಹಾಕುವ ಸಾಕ್ಷಿಯನ್ನೂ ನೀಡುತ್ತಿಲ್ಲ. ಇದನ್ನು ಗಮನಿಸಿದರೆ ಬಿಜೆಪಿಯ ಚುನಾವಣಾ ಅಕ್ರಮದಲ್ಲಿ ಆಯೋಗ ಕೈಜೋಡಿಸಿತ್ತೇ ಎಂಬ ಅನುಮಾನ ಕಾಡುತ್ತಿದೆ’ ಎಂದು ದೂರಿದರು. ‘ರಾಹುಲ್ ಹೋರಾಟಕ್ಕೆ ಕಾರ್ಯಕರ್ತರು ಕೈಜೋಡಿಸಬೇಕು’ ಎಂದು ಕೋರಿದರು. ‘ವರುಣ ವಿಧಾನಸಭಾ ಕ್ಷೇತ್ರಕ್ಕೆ ನಾವು ಈವರೆಗೆ ₹ 4500 ಕೋಟಿ ಅನುದಾನ ಒದಗಿಸಿ ಅಭಿವೃದ್ಧಿಪಡಿಸುತ್ತಿದ್ದೇವೆ. ಶೇ 90ರಷ್ಟು ಕಡೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿದ್ದೇವೆ’ ಎಂದು ತಿಳಿಸಿದರು.
‘ಯದುನಾಡು’ ಎಂದೇ ಬದಲಿಸಿ
ಸಂಸದ ಸುನೀಲ್ ಬೋಸ್ ಮಾತನಾಡಿ ‘ನಮ್ಮ ಹದಿನಾರು ಗ್ರಾಮದ ಹೆಸರನ್ನು ಹಿಂದಿನಂತೆಯೇ ‘ಯದುನಾಡು’ ಎಂದೇ ಮರುನಾಮಕರಣ ಮಾಡಬೇಕು’ ಎಂದು ಮುಖ್ಯಮಂತ್ರಿಯನ್ನು ಕೋರಿದರು. ‘ಟಿಕೆಟ್ ತಪ್ಪಿದ್ದಾಗ ರಾಜಮನೆತನದ ಬಗ್ಗೆ ವಾಗ್ದಾಳಿ ನಡೆಸಿದ್ದ ಮಾಜಿ ಸಂಸದ ಪ್ರತಾಪ ಸಿಂಹ ಈಗ ಮಹದೇವಪ್ಪ ಹೇಳಿಕೆ ವಿರುದ್ಧ ಟೀಕಿಸಿರುವುದು ಹಾಸ್ಯಾಸ್ಪದ. ರಾಜಮನೆತನವನ್ನು ಅವಹೇಳನ ಮಾಡಿದ್ದಾರೆಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.
ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವ ಹೊಣೆ ನಮ್ಮೆಲ್ಲರದಾಗಿದೆ. ಇವುಗಳನ್ನು ಕಾಪಾಡಿಕೊಂಡರೆ ನಾವು ಉಳಿಯಬಹುದು.–ಸಿದ್ದರಾಮಯ್ಯ, ಮುಖ್ಯಮಂತ್ರಿ
ಕೇಂದ್ರದ ನೀತಿಯ ಕಾರಣದಿಂದಾಗಿ ಬಡವರು ಬದುಕು ದುಸ್ತರ ಆಗುತ್ತಿದೆ. ಹೀಗಾಗಿ ಬಡವರಿಗೆ ನೆರವಾಗಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ–ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.