ADVERTISEMENT

ಎಲ್ಲಕ್ಕಿಂತ ಮಾನವ ಧರ್ಮ ಮೇಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:29 IST
Last Updated 19 ಜನವರಿ 2026, 4:29 IST
ಕೃಷಿ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ ರೈತ ಮಹಿಳೆಯರಾದ ಚಿಕ್ಕತಾಯಮ್ಮ, ಶಿವಮ್ಮ, ರತ್ನಮ್ಮ, ಎಂ.ಸಿ.ಗುಣಸಾಗರಿ ಹಾಗೂ ಎಸ್‌. ಆಶ್ವಿನಿ ಅವರನ್ನು ಸನ್ಮಾನಿಸಲಾಯಿತು
ಕೃಷಿ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ ರೈತ ಮಹಿಳೆಯರಾದ ಚಿಕ್ಕತಾಯಮ್ಮ, ಶಿವಮ್ಮ, ರತ್ನಮ್ಮ, ಎಂ.ಸಿ.ಗುಣಸಾಗರಿ ಹಾಗೂ ಎಸ್‌. ಆಶ್ವಿನಿ ಅವರನ್ನು ಸನ್ಮಾನಿಸಲಾಯಿತು   

ಮೈಸೂರು: ‘ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಮೇಲು. ನಾವೆಲ್ಲರೂ ಮೂಲತಃ ಮನುಷ್ಯರು. ನಂತರವಷ್ಟೇ ನಮ್ಮ ಜಾತಿ–ಧರ್ಮ. ಮನುಷ್ಯರಾಗಿ ಹುಟ್ಟಿ, ಮನುಷ್ಯರಾಗಿಯೇ ಸಾಯೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುತ್ತೂರಿನಲ್ಲಿ ನಡೆದಿರುವ ಶಿವರಾತ್ರೀಶ್ವರ ಶಿವಯೋಗಿ ಶ್ರೀಗಳ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ‘ಕೃಷಿಯಲ್ಲಿ ಮಹಿಳೆ: ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆ’ ಕುರಿತ ಕೃಷಿ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣ ಹೇಳುವಂತೆ, ದಯೆಯೇ ಧರ್ಮದ ಮೂಲವಯ್ಯ. ದಯೆ ಇಲ್ಲದ ಧರ್ಮವಿಲ್ಲ. ನಾವೆಲ್ಲರೂ ಬಸವಣ್ಣನ ವಿಚಾರದಲ್ಲಿ ನಂಬಿಕೆ ಇಟ್ಟವರು. ಇದನ್ನು ಅರ್ಥಮಾಡಿಕೊಳ್ಳಬೇಕು. ಯಾವ ಧರ್ಮವೂ ಪರಸ್ಪರ ಪ್ರೀತಿಸಿ ಎಂದು ಹೇಳುತ್ತದೆಯೇ ಹೊರತು ದ್ವೇಷಿಸಿ ಎಂದು ಹೇಳುವುದಿಲ್ಲ. ಇನ್ನೊಬ್ಬರನ್ನು ದ್ವೇಷಿಸುವ ಕೆಲಸ ಮಾಡಬಾರದು. ಇದೇ ಸಮಾಜಕ್ಕೆ ನಾವು ಕೊಡುವ ಕೊಡುಗೆ’ ಎಂದು ಆಶಿಸಿದರು.

ADVERTISEMENT

‘ಸುತ್ತೂರು ಜಾತ್ರೆಯು ನಾಡಿನ ಪ್ರಮುಖ ಜಾತ್ರೆ. ಸಾವಿರ ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಮಠ ಇದಾಗಿದ್ದು, ಧಾರ್ಮಿಕ ಕಾರ್ಯಗಳ ಜೊತೆಗೆ ಶಿಕ್ಷಣಕ್ಕೂ ಒತ್ತು ನೀಡುತ್ತ ಜ್ಞಾನ ಮತ್ತು ಅನ್ನ ದಾಸೋಹ ಮಾಡುತ್ತ ಬಂದಿದೆ. ಶಿಕ್ಷಣದಿಂದ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ. ನಮ್ಮ ವ್ಯಕ್ತಿತ್ವ ರೂಪುಗೊಳ್ಳುವುದು ಅದರಿಂದಲೇ. ಸಮಾಜದಲ್ಲಿ ಶೇ 85ರಷ್ಟು ಜನ ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಅದನ್ನು ಮನಗೊಂಡ ಸುತ್ತೂರು ಮಠವು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ’ ಎಂದು ವಿವರಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ‘ಕರ್ನಾಟಕದಲ್ಲಿ ಪ್ರಗತಿಪರ ಶರಣ ಪರಂಪರೆ ಬೆಳೆಯಲು ಇಲ್ಲಿನ ಮಠಗಳು ಕಾರಣ. ರೈತರ ಬದುಕು ಸುಧಾರಣೆ ಆದಲ್ಲಿ ಮಾತ್ರ ದೇಶದ ಸುಧಾರಣೆ ಸಾಧ್ಯ’ ಎಂದರು.

ಉಪನ್ಯಾಸ ನೀಡಿದ ತೀರ್ಥಹಳ್ಳಿ ತಾಲ್ಲೂಕಿನ ಪ್ರಗತಿಪರ ರೈತ ಮಹಿಳೆ ಆಶಾ ಶೇಷಾದ್ರಿ, ‘ಸ್ತ್ರೀಯರೂ ಕೃಷಿ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಹೊಸ ಪ್ರಯೋಗಗಳಿಗೆ ಕೈ ಹಾಕಬೇಕು. ಸಮಾಜಕ್ಕೆ ಅನ್ನ ನೀಡುವ ಅನ್ನಪೂರ್ಣೆಯರಾಗಬೇಕು’ ಎಂದು ಆಶಿಸಿದರು.

ಮಂಡ್ಯ ಕೃಷಿ ವಿ.ವಿ. ವಿಶೇಷಾಧಿಕಾರಿ ಕೆ.ಎಂ. ಹರಿಣಿಕುಮಾರ, ‘ಭಾರತದ ಕೃಷಿಯಲ್ಲಿ ಶೇ 55–60ರಷ್ಟು ಕಾರ್ಮಿಕರು ಮಹಿಳೆಯರೇ ಆಗಿದ್ದಾರೆ. ಮಹಿಳೆ ಹೊಲದಲ್ಲಿ ಬೀಜ ಬಿತ್ತಿದರೆ ಭವಿಷ್ಯ ಬಿತ್ತಿದಂತೆ. ಸುಸ್ಥಿರ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾದದು’ ಎಂದರು.

ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ‘ಹೈನುಗಾರಿಕೆಯಲ್ಲಿ ಮಹಿಳೆಯರದ್ದೇ ಸಿಂಹಪಾಲು. ಅವರಿಗೆ ಇನ್ನಷ್ಟು ಸವಲತ್ತು ಸಿಗಬೇಕಿದೆ’ ಎಂದು ಆಶಿಸಿದರು.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಪ್ರಗತಿಪರ ರೈತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಹಾಗೂ ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಶಾಸಕರಾದ ರವಿಶಂಕರ್, ಗಣೇಶಪ್ರಸಾದ್‌, ಎ.ಆರ್. ಕೃಷ್ಣಮೂರ್ತಿ, ಯಶವಂತ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವೆ ಗೀತಾ ಗಣೇಶಪ್ರಸಾದ್, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ. ರೇವಣ್ಣ, ವಿಭಾಗೀಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಮುಖಂಡರಾದ ಎಂ.ಕೆ. ಸೋಮಶೇಖರ್, ಅಯೂಬ್ ಖಾನ್‌ ಪಾಲ್ಗೊಂಡಿದ್ದರು.

ರೈತರು–ಮಹಿಳೆಯರಿಗೆ ಸನ್ಮಾನ

ಯಳಂದೂರು ತಾಲ್ಲೂಕು ದುಗ್ಗಹಟ್ಟಿ ಗ್ರಾಮದ ಸುಂದರಮ್ಮ ವೀರಭದ್ರಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರತಿವರ್ಷ ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಬೆಳೆ ಬೆಳೆದ 10 ರೈತರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಪುರಸ್ಕೃತರು: ಬಾಳೆ ಬೆಳೆ: ಯಳಂದೂರು ತಾಲ್ಲೂಕಿನ ಗೌಡಹಳ್ಳಿಯ ಶಿವಮಲ್ಲಪ್ಪ–1 ಮಲಾರಪಾಳ್ಯದ ಎಂ. ಗುರುಸ್ವಾಮಿ–2; ಮುಸುಕಿನ ಜೋಳ: ಹನೂರು ತಾಲ್ಲೂಕಿನ ಲೋಕ್ಕನಹಳ್ಳಿಯ ವೆಂಕಟೇಶ್–1 ಆಂಡಿಪಾಳ್ಯದ ಎಂ.ಮೂರ್ತಿ–2; ಕಬ್ಬು: ಕೊಳ್ಳೇಗಾಲ ತಾಲ್ಲೂಕಿನ ಅಣಗಲಿಯ ಎಂ. ಮಾದಯ್ಯ–1 ಸುರಪುರ ಗ್ರಾಮದ ಎಲ್. ರವಿ–2; ಟೊಮ್ಯಾಟೊ: ಚಾಮರಾಜನಗರ ತಾಲ್ಲೂಕಿನ ವೀರನಪುರ ಗ್ರಾಮದ ಪಿ. ಸಿದ್ದರಾಜು–1 ಕೆಬ್ಬೇಪುರ ಗ್ರಾಮದ ಎಂ.ಪ್ರಭುಸ್ವಾಮಿ–2: ಪೋಲ್ ಬೀನ್ಸ್: ಗುಂಡ್ಲುಪೇಟೆ ತಾಲ್ಲೂಕಿನ ಕುರುಬಗೇರಿಯ ಕೃಷ್ಣಗೌಡ–1 ನೇನೆಕಟ್ಟೆಯ ಕೆ.ಬಸವಣ್ಣ–2 ರೈತ ಮಹಿಳೆಯರಿಗೆ ಪ್ರಶಸ್ತಿ: ಮಾದಾಪುರ ಕೆಂದಾವರೆ ಪದ್ಮಭೂಷಣ ಮಹದೇವಪ್ಪ ಸೇವಾ ಟ್ರಸ್ಟ್ (ಎಂಕೆಪಿಎಂಎಸ್‌ಟಿ) ಸಹಯೋಗದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಸಾಧನೆ ಮಾಡಿದ ಐವರು ರೈತ ಮಹಿಳೆಯರನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು. ಭತ್ತದ ಬೆಳೆಯಲ್ಲಿ ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮ ಚಿಕ್ಕತಾಯಮ್ಮ ಹುಣಸೂರು ತಾಲ್ಲೂಕಿನ ಬೀರನಹಳ್ಳಿ ಗ್ರಾಮದ ಶಿವಮ್ಮ ಬಾಳೆ ಬೆಳೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಕುಂಬಾರಗುಂಡಿ ಗ್ರಾಮದ ರತ್ನಮ್ಮ ರೇಷ್ಮೆ ಬೆಳೆಯಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದ ಎಂ.ಸಿ.ಗುಣಸಾಗರಿ ಹಾಗೂ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಮೈಸೂರು ತಾಲ್ಲೂಕಿನ ದೂರ ಗ್ರಾಮದ ಎಸ್‌. ಆಶ್ವಿನಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.