ನಂಜನಗೂಡು ತಾಲ್ಲೂಕಿನ ಸುತ್ತೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶ್ವ ತೆಂಗು ದಿನಾಚರಣೆಯಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕೆ. ಆರ್ .ರವೀಂದ್ರ ಮಾತನಾಡಿದರು.
ನಂಜನಗೂಡು: ಕಲ್ಪವೃಕ್ಷ ಎಂದು ಹೆಸರಾಗಿರುವ ತೆಂಗಿನ ಬೆಳೆಗೆ ಇರುವ ಮಹತ್ವ ಹಾಗೂ ತೆಂಗಿನ ಶಕ್ತಿಯನ್ನು ವಿಶ್ವಕ್ಕೆ ಸಾರೋಣ ಎಂದು ನಿವೃತ್ತ ಕೃಷಿ ಅಧಿಕಾರಿ ಕೆ. ಆರ್. ರವೀಂದ್ರ ಹೇಳಿದರು.
ತಾಲ್ಲೂಕಿನ ಸುತ್ತೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶ್ವ ತೆಂಗು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೆಂಗು ಬೆಳೆಯನ್ನು ಏಕ ಬೆಳೆ ಪದ್ಧತಿಯಲ್ಲಿ ಬೆಳೆಯುವ ಬದಲು ಬಹು ಬೆಳೆ ಮತ್ತು ಸಮಗ್ರ ಕೃಷಿಯಲ್ಲಿ ತೆಂಗನ್ನು ಅಳವಡಿಸಿಕೊಂಡಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ. ತೆಂಗಿನ ಬೆಳೆಯಲ್ಲಿ ಬರುವ ಪ್ರಮುಖ ಕೀಟಗಳಾದ ಸುರುಳಿ ಬಿಳಿ ನೊಣ, ಕಪ್ಪು ತಲೆ ಹುಳುಗಳ ಜೈವಿಕ ನಿರ್ವಹಣೆಗಾಗಿ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಕಾರ್ಯ ನಿರ್ವಹಿಸುತ್ತಿದೆ. ಆಸಕ್ತ ರೈತರು ಪರಭಕ್ಷಕ ಮತ್ತು ಪರಾವಲಂಬಿ ಜೀವಿಗಳ ಉತ್ಪಾದನೆಯ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಹಿರಿಯ ಕೃಷಿ ವಿಜ್ಞಾನಿ ಗುಂಡಪ್ಪ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ತೆಂಗಿನ ಬೆಳೆಯನ್ನು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ಉತ್ತಮ ಗುಣಮಟ್ಟದ ಸಸಿಗಳನ್ನು ಆಯ್ಕೆಮಾಡುವಲ್ಲಿ ರೈತರು ವಿಫಲರಾಗುತ್ತಿದ್ದಾರೆ. ಸಸಿಗಳ ಲಭ್ಯತೆ ಇಲ್ಲದಿರುವ ಸಮಸ್ಯೆ ಇದೆ. ಈ ನಿಟ್ಟಿನಲ್ಲಿ ರೈತರು ಉತ್ತಮ ಸಸಿಗಳ ಆಯ್ಕೆ ಮತ್ತು ಬೆಳವಣಿಗೆ ಹಾಗೂ ತೆಂಗಿನ ತೋಟದಲ್ಲಿ ಸಿಗುವ ಕೃಷಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು ತೋಟವನ್ನು ಸಮಗ್ರವಾಗಿ ನಿರ್ವಹಿಸಬಹುದು’ ಎಂದು ತಿಳಿಸಿದರು.
ರಾಮೇಗೌಡ , ಪ್ರಸಾದ್ , ದಿವ್ಯಾ ಎಚ್. ವಿ.ಶಾಮರಾಜ್, ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ನಿರ್ದೇಶಕ ಎನ್. ಎಂ ಶಿವಶಂಕರಪ್ಪ , ಬಿ. ಎನ್. ಜ್ಞಾನೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.