ADVERTISEMENT

ವಿಶ್ವ ತೆಂಗು ದಿನಾಚರಣೆ | ವಾರ್ಷಿಕ ₹ 5 ಕೋಟಿ ವಹಿವಾಟು: ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 2:38 IST
Last Updated 4 ಸೆಪ್ಟೆಂಬರ್ 2025, 2:38 IST
ಹುಣಸೂರು ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮವನ್ನು ಪ್ರಗತಿಪರ ರೈತ ಮಹಿಳೆ ವಸಂತಮ್ಮ ತೆಂಗಿನ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು.
ಹುಣಸೂರು ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮವನ್ನು ಪ್ರಗತಿಪರ ರೈತ ಮಹಿಳೆ ವಸಂತಮ್ಮ ತೆಂಗಿನ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು.   

ಹುಣಸೂರು: ‘ತೆಂಗು ಬೆಳೆಗಾರರು ಗಣನೀಯವಾಗಿ ಹೆಚ್ಚಾಗುತ್ತಿದ್ದು, ತೋಟಗಾರಿಕೆ ಬೆಳೆಯತ್ತ ಆಸಕ್ತಿ ಮೂಡಿರುವುದು ಶ್ಲಾಘನೀಯ’ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜ್‌ ಹೇಳಿದರು.

ತಾಲ್ಲೂಕಿನ ಹನುಮಂತಪುರದಪ್ರಗತಿಪರ ರೈತ ಮಹಿಳೆ ವಸಂತಮ್ಮ ಅವರ ತೆಂಗಿನ ತೋಟದಲ್ಲಿ ಬುಧವಾರ ವಿಶ್ವ ತೆಂಗು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ತೆಂಗು ಬೇಸಾಯ ಎಲ್ಲ ವಾತಾವರಣಗಳಲ್ಲೂ ಬೆಳೆಯಬಹುದಾದ ಆರ್ಥಿಕ ಬೆಳೆಯಾಗಿದ್ದು, ರೈತರ ಆರ್ಥಿಕ ಶಕ್ತಿ ವೃದ್ಧಿಯಾಗಿದೆ’ ಎಂದರು.

‘ತಾಲ್ಲೂಕಿನಲ್ಲಿ 4,500 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ತೋಟಗಾರಿಕೆ ಇದ್ದು, ವಾರ್ಷಿಕ 16,479 ಮೆಟ್ರಿಕ್‌ ಟನ್‌ ಉತ್ಪಾದನೆಯಾಗಿ ₹ 5.93 ಕೋಟಿ ಆರ್ಥಿಕ ವಹಿವಾಟು ನಡೆದಿದೆ. ಪ್ರತಿ ಹೆಕ್ಟೇರ್‌ ಪ್ರದೇಶದಲ್ಲಿ 3.47 ಟನ್‌ ತೆಂಗು ಉತ್ಪಾದನೆಯಾಗುತ್ತಿದೆ’ ಎಂದರು.

ADVERTISEMENT

‘ತೆಂಗು ಬೇಸಾಯಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಹೊಸದಾಗಿ ತೋಟ ನಿರ್ಮಿಸುವ ರೈತರಿಗೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಪ್ರತಿ ತೆಂಗಿನ ಸಸಿ ನಿರ್ವಹಣೆಗೆ ವಾರ್ಷಿಕ ₹200 ಸಹಾಯ ಧನ ನೀಡಲಾಗುತ್ತದೆ. ನರೇಗಾ ಯೋಜನೆಯಲ್ಲಿ 60:40 ಅನುಪಾತದಲ್ಲಿ ಪ್ರತಿ ಹೆಕ್ಟೇರ್‌ಗೆ ₹ 40 ಸಾವಿರ ಸಹಾಯ ಧನ ದೊರಕಲಿದೆ’ ಎಂದರು.

ಕೃಷಿ ಕೀಟಶಾಸ್ತ್ರ ವಿಭಾಗದ ಡಾ.ಮೌಲ್ಯ ಎಂ.ಆರ್‌. ಮಾತನಾಡಿ, ‘ತೆಂಗಿನ ಬೆಳೆ ಕಪ್ಪುತಲೆ ಹುಳು ರೋಗ ಬಾಧೆಗೆ ಸಿಲುಕಿದ್ದು, ಎಲೆಯ ಹಸಿರನ್ನು ತಿಂದು ಗರಿ ಒಣಗಿದಂತೆ ಕಾಣುವುದು. ಈ ರೋಗಕ್ಕೆ ಒಳಗಾದ ಗರಿಯನ್ನು ಕತ್ತರಿಸಿ ಬೆಂಕಿಗೆ ಹಾಕುವುದರಿಂದ ನಿಯಂತ್ರಣ ಸಾಧ್ಯ’ ಎಂದರು.

‘ಕಪ್ಪುತಲೆ ಹುಳು ಮರಿ ಹಂತದಲ್ಲಿದ್ದಾಗ, ಪ್ರತಿ ಮರಕ್ಕೆ 20 ಗೋನಿಯೋಜಸ್‌ ನೆಫಾಂಟಿಡಿಸ್‌ ಪರತಂತ್ರ ಜೀವಿಗಳನ್ನು 15 ದಿನಕ್ಕೆ ಒಮ್ಮೆ 4 ಬಾರಿ ಬಿಡಬೇಕು. ಇಲಾಖೆ ಶಿಫಾರಸು ಮಾಡಿದ ಔಷಧಿಯನ್ನು ಸಿಂಪಡಿಸಬಹುದು. ಬೇರಿನ ಮೂಲಕ ಶೇ 5 ರಷ್ಟು ಅಝಾಡಿರೆಕ್ಟಿನ್‌ ಮಾನೋಕ್ರೊಟೋಪಾಸ್‌ 36 ಎಸ್.ಸಿ. 10 ಮಿ.ಲೀ. ಸಮಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಿ ಪ್ರತಿ ಮರದ ಬೇರಿಗೆ ವಾರ್ಷಿಕ ಮೂರು ಬಾರಿ ಜನವರಿ, ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಕಟ್ಟುವುದರಿಂದ ಹುಳು ಬಾಧೆ ನಿಯಂತ್ರಿಸಬಹುದು’ ಎಂದರು.

ನಾಗನಹಳ್ಳಿ ತೋಟಗಾರಿಕೆ ವಿಭಾಗದ ವಿಜ್ಞಾನಿಗಳಾದ ಡಾ.ಶಿವಕುಮಾರ್‌ , ಧರಣೇಶ, ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್‌, ಬಿಳಿಕೆರೆ ತೋಟಗಾರಿಕೆ ಸಹಾಯಕ ನಿರ್ದೇಶಕಿ ಚೈತ್ರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.