
ಮೈಸೂರು: ‘ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣ ಸವಾಲು. ಇದೊಂದು ಸುದೀರ್ಘ ಪಯಣ. ಹೀಗಾಗಿ ಒಂದೇ ವಿಷಯದತ್ತ ಗಮನಹರಿಸದೆ ಸಮಗ್ರ ಓದಿಗೆ ಒತ್ತು ನೀಡಬೇಕು’ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಸೋಮವಾರ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಯುಪಿಎಸ್‌ಸಿ ಹಾಗೂ ಕೆಪಿಎಸ್ ಪರೀಕ್ಷೆಗಳ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲ ಮಾಹಿತಿಯೂ ಸುಲಭವಾಗಿ ಸಿಗುತ್ತಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಅಗತ್ಯವಾಗುತ್ತದೆ. ಎಷ್ಟೇ ಬುದ್ಧಿವಂತಿಕೆ ಇದ್ದರೂ ನಿರಂತರ ಓದು ಅಗತ್ಯ. ಮನಸ್ಸಿಟ್ಟು ಪ್ರಯತ್ನಿಸಿದರೆ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಂತಹ ಹುದ್ದೆಗಳನ್ನು ಪಡೆಯಬಹುದು. ಇದಕ್ಕಾಗಿ, ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಪ್ರಸ್ತುತ ಸ್ಪರ್ಧೆ ತೀವ್ರವಾಗಿದ್ದು, ಒಂದು ಹುದ್ದೆಗೆ ಅನೇಕರು ಅರ್ಜಿ ಹಾಕುತ್ತಾರೆ. ಅನೇಕ ವರ್ಷಗಳಿಂದ ರಾಜ್ಯ ಸರ್ಕಾರ ಹಲವು ಪರೀಕ್ಷೆಗಳನ್ನು ನಡೆಸಿರಲಿಲ್ಲ. ಇದೀಗ ಎಲ್ಲವನ್ನೂ ಮಾಡಲು ತೀರ್ಮಾನಿಸಿದೆ. ಒಳಮೀಸಲಾತಿ ಗೊಂದಲ ಬಹುತೇಕ ಪರಿಹಾರವಾಗಿದೆ. ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ಓದಿಗೆ ಗಮನ ಕೊಡಬೇಕು’ ಎಂದರು.
‘ಶ್ರೀಮಂತರಿಗೆ ಅಥವಾ ಹಣ ಕೊಟ್ಟವರಿಗೆ ಮಾತ್ರ ಸರ್ಕಾರಿ ನೌಕರಿ ಸಿಗುತ್ತದೆ ಎಂಬ ನಕಾರಾತ್ಮಕ ಮನೋಭಾವ ಬೇಡ. ಕುರಿ ಕಾಯುವವರು, ಬಡ ಕಾರ್ಮಿಕರ ಮಕ್ಕಳೂ ಐಎಎಸ್, ಐಪಿಎಸ್ ಅಧಿಕಾರಿಗಳಾದ ಉದಾಹರಣೆ ಇದೆ’ ಎಂದು ಹೇಳಿದರು.
ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ಸಾಧನಾ ಎ.ಪೋಟೆ, ‘ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡದ ಯುವಕ, ಯುವತಿಯರು ಹೆಚ್ಚೆಚ್ಚು ತೆಗೆದುಕೊಳ್ಳಬೇಕು’ ಎಂದರು.
‘ಸ್ಮರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಎನ್‌ಸಿಇಆರ್‌ಟಿ ಪಠ್ಯಕ್ರಮದ 7, 8, 9ನೇ ತರಗತಿಯ ಪಠ್ಯಪುಸ್ತಕಗಳನ್ನು ಪೂರ್ಣವಾಗಿ ಓದಿಕೊಳ್ಳಿ. ಅದು ಅಡಿಪಾಯ ನೀಡುತ್ತದೆ. ಪರೀಕ್ಷೆಗೆ ಅನುಕೂಲ ಆಗುತ್ತದೆ’ ಎಂದು ತಿಳಿಸಿದರು.
ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ‘ನಮ್ಮ ವಿವಿಯಲ್ಲಿ ನಡೆಯುವ ಇಂತಹ ತರಬೇತಿ ಶಿಬಿರಗಳನ್ನು ಯುವಜನರು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು’ ಎಂದರು.
ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಸ್. ಆನಂದ್‌ಕುಮಾರ್, ಹಣಕಾಸು ಅಧಿಕಾರಿ ಎಸ್. ನಿರಂಜನ್‌ರಾಜ್, ಅಧ್ಯಯನ ಕೇಂದ್ರದ ಡೀನ್ ಎನ್.ಆರ್. ಚಂದ್ರೇಗೌಡ, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.