ADVERTISEMENT

‘ಗಾಂಧಿ ಸಿದ್ಧಾಂತದಿಂದ ಜಾತಿ ಅಂತ್ಯ’

140ನೇ ಕಾಂಗ್ರೆಸ್ ಸಂಸ್ಥಾಪನಾ ದಿನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 8:30 IST
Last Updated 29 ಡಿಸೆಂಬರ್ 2025, 8:30 IST
ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ಆಯೋಜಿಸಿದ್ದ 140ನೇ ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಕಿಮ್ಮನೆ ರತ್ನಾಕರ ಉದ್ಘಾಟಿಸಿದರು
ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ಆಯೋಜಿಸಿದ್ದ 140ನೇ ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಕಿಮ್ಮನೆ ರತ್ನಾಕರ ಉದ್ಘಾಟಿಸಿದರು   

ಮೈಸೂರು: ‘ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ವಿದ್ಯಾವಂತರೇ ನಿಂದಿಸುತ್ತಿರುವುದು ವಿಷಾದನೀಯ. ಅವರ ಸಿದ್ಧಾಂತಗಳಿಂದ ಜಾತೀಯತೆ ಹಾಗೂ ಬಿಜೆಪಿಯ ಒಡೆದು ಆಳುವ ನೀತಿ ಕೊನೆಗಾಣಿಸಬಹುದು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ಪಕ್ಷದಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ 140ನೇ ಕಾಂಗ್ರೆಸ್ ಸಂಸ್ಥಾಪನಾ ದಿನ ಉದ್ಘಾಟಿಸಿ ಮಾತನಾಡಿದರು. 

‘ಜಾತಿ ಬೇಡ ಎನ್ನುವುದನ್ನೇ ದೇಶ ದ್ರೋಹ ಎಂದು ಬಿಜೆಪಿ ಬಿಂಬಿಸುತ್ತಿದೆ. ಇದು ಆರ್‌ಎಸ್‌ಎಸ್‌ನ ಮೂಲ ಆಶಯವೂ ಹೌದು. ಈ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಾಗಿ ಕಾಂಗ್ರೆಸ್‌ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ್ನು 1885ರಿಂದಲೇ ವಿರೋಧಿಸುತ್ತಾ ಬಂದಿದೆ’ ಎಂದು ಹೇಳಿದರು.

ADVERTISEMENT

‘ಅಂಬೇಡ್ಕರ್‌ ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ವಿರೋಧಿಸಿದ್ದರು. ಬಹಿರಂಗವಾಗಿ ಮನುಸ್ಮೃತಿ ಸುಟ್ಟರು. ಆದರೆ, ಬಿಜೆಪಿಯ ಕೆಟ್ಟ ನಿಲುವಿನಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ. ಮೋದಿ ಹಾಗೂ ಬಿಜೆಪಿ ನಾಯಕರು ಕಾಂಗ್ರೆಸ್‌ನ ಮಹಾನ್‌ ನಾಯಕರನ್ನು ನಿತ್ಯ ದೂಷಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರೂ ನಮ್ಮ ನಾಯಕರ ವಿಚಾರ ತಿಳಿದುಕೊಳ್ಳದಿದ್ದರೆ ಅವರ ಮಾಡು ಕೇಳಿ ಸುಮ್ಮನಾಗಬೇಕಾಗುತ್ತದೆ. ನಾವು ಸತ್ಯ ವಿಚಾರಗಳನ್ನು ಜನರಿಗೆ ತಲುಪಿಸುವವರಾಗಬೇಕು’ ಎಂದು ಸಲಹೆ
ನೀಡಿದರು.

‘ಸಂವಿಧಾನ ಬದಲಿಸಲು ಬಿಜೆಪಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಬೇಕು’ ಎಂದರು.

‍ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ‘ಇಡಿ ಬಳಸಿಕೊಂಡು ಕಾಂಗ್ರೆಸ್‌ ನಿಯಂತ್ರಿಸಲು ವಿಫಲ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಕಾರ್ಯಕರ್ತರು ಚಳವಳಿ ನಿಲ್ಲಿಸಬಾರದು’ ಎಂದು ಹೇಳಿದರು.

ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಶಾಸಕ ಕೆ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಭಾಗವಹಿಸಿದ್ದರು.