ADVERTISEMENT

ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿಲ್ಲ–ಪ್ರಶಾಂತಗೌಡ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 13:43 IST
Last Updated 1 ಡಿಸೆಂಬರ್ 2020, 13:43 IST

ಮೈಸೂರು: ‘ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಅವರ ಆರೋಪ ಸತ್ಯಕ್ಕೆ ದೂರ’ ಎಂದು ಕಾಂಗ್ರೆಸ್ ಮುಖಂಡ ಪಿ.ಪ್ರಶಾಂತಗೌಡ ತಿಳಿಸಿದರು.

ಪುರಾತನ ಕಟ್ಟಡಗಳ ನವೀಕರಣಕ್ಕೆ ಅನುಮತಿ ನೀಡಲಾಗಿದೆ, ಗಂಗಮ್ಮನ ಗುಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಕಳಪೆಯಾಗಿದೆ. ಇ–ಶೌಚಾಲಯಗಳು ಸ್ಥಗಿತಗೊಂಡಿವೆ. ವಿನೋಬಾ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ಅವೈಜ್ಞಾನಿಕವಾಗಿ ಟೈಲ್ಸ್ ಅಳವಡಿಸಲಾಗುತ್ತಿದೆ. ಇದರ ಕುರಿತು ಪ್ರಮೀಳಾ ಭರತ್ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮುಖಂಡರಾದ ‍ಪುಷ್ಪವಲ್ಲಿ ಮಾತನಾಡಿ, ‘ನಾವು ವೈಜ್ಞಾನಿಕವಾಗಿ ಕಾಮಗಾರಿ ಮಾಡಿ ಎಂದು ಹೇಳುತ್ತಿದ್ದೇವೆಯೇ ಹೊರತು ದ್ವೇಷದ ರಾಜಕಾರಣ ಮಾಡುತ್ತಿಲ್ಲ’ ಎಂದು ತಿಳಿಸಿದರು.

ADVERTISEMENT

ಆರೋಪ ನಿರಾಧಾರ– ಪ್ರಮೀಳಾ ಭರತ್

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ‘ಕಟ್ಟಡ ನವೀಕರಣಕ್ಕೆ ಪರವಾನಗಿ ನೀಡುವುದು ಅಧಿಕಾರಿಗಳು. ಇ–ಶೌಚಾಲಯ ದುರಸ್ತಿಗೆ ಆಗ್ರಹಿಸಿ 3 ಬಾರಿ ಪ್ರತಿಭಟನೆ ಮಾಡಿ, ಅದನ್ನು ತೆರೆಸಲಾಗಿತ್ತು. ನಗರಾದ್ಯಂತ ಮತ್ತೆ ಮತ್ತೆ ಅದು ಕೆಡುತ್ತಿದೆ. ಗಂಗಮ್ಮನ ಗುಡಿ ರಸ್ತೆಯ ಕಾಮಗಾರಿ ಕಳಪೆಯಾಗಿದೆ ಎಂದು ಈ ಹಿಂದೆಯೇ ನಾನು ದನಿ ಎತ್ತಿದ್ದೆ ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.