ಮೈಸೂರು: ‘ಬಿಜೆಪಿಯವರು ಮುಸ್ಲಿಂ ಪದವನ್ನು ಬಳಸದೇ ರಾಜಕರಣ ಮಾಡಲಿ’ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಸ್ಲಿಂ ಹೆಸರು ಬಳಸದೆ ಸಂಘಟನೆ ಮಾಡಲಿ. ನಮ್ಮ ಜನರ ಹೆಸರು ಹೇಳಿ ರಾಜಕೀಯ ಮಾಡುವುದೇ ಅವರ ಬಂಡವಾಳ’ ಎಂದು ಟೀಕಿಸಿದರು.
‘ದೇಶದಲ್ಲಿ ನಾವು ಶೇ 20ರಷ್ಟು ಇದ್ದೇವೆ. ಪ್ರಗತಿಗೆ ನಮ್ಮ ಕೊಡುಗೆಯೂ ಅಪಾರ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ಯಾಗ– ಬಲಿದಾನ ಮಾಡಿದ್ದೇವೆ. ಬ್ರಿಟಿಷರ ಬೂಟು ನೆಕ್ಕಿಲ್ಲ’ ಎಂದರು.
‘ಮುಸ್ಲಿಮರಿಗೆ ಏನಾದರೂ ಘೋಷಣೆ ಮಾಡಿದರೆ ಸಾಕು, ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು ಶುರುವಾಗುತ್ತದೆ. ರಾಜ್ಯ ಬಜೆಟ್‌ನಲ್ಲಿ ಎಲ್ಲರಿಗೂ ಆದ್ಯತೆ ಕೊಡಲಾಗಿದೆ. ಶಿಕ್ಷಣ, ಕೈಗಾರಿಕೆ, ಮೂಲಸೌಕರ್ಯ ಎಲ್ಲದಕ್ಕೂ ಹಣ ನೀಡಲಾಗಿದೆ. ಬಿಜೆಪಿಯವರು ಏನು ಬೇಕಾದರೂ ಹೇಳಲಿ, ಈ ಬಜೆಟ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಹೇಳಿದರು.
‘ಬಿಜೆಪಿಯವರು ಹಲಾಲ್ ಬಜೆಟ್ ಎಂದೆಲ್ಲಾ ಹೇಳಿದರೂ ನಾವೇನು ಬೇಜಾರು ಮಾಡಿಕೊಳ್ಳುವುದಿಲ್ಲ. ಈ ದೇಶ ನಮ್ಮದು. ಅವರಷ್ಟೇ ನಮಗೂ ಹಕ್ಕಿದೆ. ದೇಶದ ಅಭಿವೃದ್ಧಿಗೆ ನಾವು ಸದಾ ಕೊಡುಗೆ ನೀಡುತ್ತಲೇ ಇದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.