ADVERTISEMENT

ಶೇ 100 ಕಮಿಷನ್‌ಗಾಗಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ: ಬೊಮ್ಮಾಯಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 18:12 IST
Last Updated 7 ಮಾರ್ಚ್ 2023, 18:12 IST
   

ಮೈಸೂರು: ‘ಕಾಂಗ್ರೆಸ್‌ನವರು ಶೇ 100ರಷ್ಟು ಕಮಿಷನ್‌ ಪಡೆಯುವ ಉದ್ದೇಶದಿಂದ ‘ಪ್ರಜಾಧ್ವನಿ ಯಾತ್ರೆ’ ನಡೆಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿ ಮಂಗಳವಾರ ತಿರುಗೇಟು ನೀಡಿದರು.

‘ಬಿಜೆಪಿಯದ್ದು ಶೇ 40ರಷ್ಟು ಕಮಿಷನ್‌ ಸಂಕಲ್ಪ ಯಾತ್ರೆ’ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆಗೆ ಇಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಅವರು, ‘ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ನವರ ಕೈಗಳೇ ಕಪ್ಪಾಗಿವೆ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಹೇಳಿದರು.

ಇಲ್ಲಿನ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಮಾ. 9ರಂದು ಕಾಂಗ್ರೆಸ್‌ನಿಂದ ಬಂದ್‌ಗೆ ಕರೆ ನೀಡಿರುವ ಬಗ್ಗೆ ಕುಹಕದಿಂದ ನಕ್ಕ ಅವರು, ‘ಎರಡು ಗಂಟೆ ಬಂದ್ ಎಂದರೆ ಏನರ್ಥ. ಯಾವತ್ತಾದರೂ ಇಂಥ ಬಂದ್ ಬಗ್ಗೆ ಕೇಳಿದ್ದೀರಾ. ಇದನ್ನು ಬಂದ್ ಎನ್ನುತ್ತಾರಾ? ಭ್ರಷ್ಟಾಚಾರ ಮಾಡಿದವರು, ಜೈಲಿಗೆ ಹೋಗಿ ಬಂದವರು ಕರೆ ಕೊಟ್ಟರೆ ಜನರ ಮುಂದೆ ನಡೆಯುತ್ತದೆಯೇ? ಈ ಬಂದ್‌ಗೆ ಯಾವ ಬೆಲೆಯೂ ಇಲ್ಲ. ಅಂದು ಪರೀಕ್ಷೆಗಳಿದ್ದು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ಇದು ಕಾಂಗ್ರೆಸ್‌ನವರಿಗೆ ಅರ್ಥವಾಗುವುದಿಲ್ಲ. ಬಂದ್ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶವೂ ಇದೆ’ ಎಂದು ಹೇಳಿದರು. ‘ಲೋಕಾಯುಕ್ತ ಬಂದ್ ಮಾಡಿದ್ದೆ ಎಂಬುದನ್ನು ಬಿಜೆಪಿಯವರು ಸಾಬೀತುಪಡಿಸಿದರೆ ತಕ್ಷಣ ರಾಜೀ ನಾಮೆ ಕೊಡುತ್ತೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಲೋಕಾಯುಕ್ತದ ಹಲ್ಲುಗಳನ್ನೆಲ್ಲಾ ಕಿತ್ತು ಹಾಕಿದ್ದರು. ಹಲ್ಲು ಕಿತ್ತ ಮೇಲೆ ಇದ್ದರೆಷ್ಟು, ಇಲ್ಲದಿದ್ದರೆಷ್ಟು?’ ಎಂದು ಕೇಳಿದರು.‌

ADVERTISEMENT

ಸಚಿವರಾದ ವಿ.ಸೋಮಣ್ಣ, ಕೆ.ಸಿ.ನಾರಾಯಣಗೌಡ ಪಕ್ಷಾಂತರ ಕುರಿತ ವದಂತಿಗೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ನಕಾರ ವ್ಯಕ್ತಪಡಿಸಿದರು.

‘ದಶಪಥ ಕ್ರೆಡಿಟ್‌ ಕಾಂಗ್ರೆಸ್‌ಗೆ ಹೇಗೆ ಸಲ್ಲುತ್ತದೆ?’
‘ಮೈಸೂರು– ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಕಾಂಗ್ರೆಸ್‌ಗೆ ಹೇಗೆ ಸಲ್ಲುತ್ತದೆ ಹೇಳಿ? ರಸ್ತೆಯಾಗಿದ್ದು ನಮ್ಮ ಸರ್ಕಾರದಲ್ಲಿ; ಮಾಡಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಸಿದ್ದರಾಮಯ್ಯ ಹೇಗೆ ಮಾಡುತ್ತಾರೆ? ಕಾಂಗ್ರೆಸ್‌ನವರ ಮಾತು ಕೇಳಿದರೆ ಜನ ನಗುತ್ತಾರೆ‌. ಹಾಗೆ ನೋಡಿದರೆ, ರಸ್ತೆ ವಿಸ್ತರಣೆ ಆಗಬೇಕೆಂಬ ಪ್ರಸ್ತಾವ 20 ವರ್ಷಗಳ ಹಿಂದಿ ನಿಂದಲೂ ಇತ್ತು. ಪ್ರಸ್ತಾವಕ್ಕೂ ಹಣ ಬಿಡುಗಡೆ ಮಾಡಿ ಅನುಷ್ಠಾನಕ್ಕೆ ತರುವುದಕ್ಕೂ ವ್ಯತ್ಯಾಸವಿದೆ’ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

‘ಸಿದ್ದರಾಮಯ್ಯ ಹೆದ್ದಾರಿ ಪರಿಶೀಲಿಸಲು ನಮ್ಮ ತಕರಾರೇನಿಲ್ಲ. ಈಗಾಗಲೇ ಅಲ್ಲಿ ಸಾವಿರಾರು ಜನರು ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು’ ಎಂದರು.

*
ಸಿದ್ದರಾಮಯ್ಯ ಅವಧಿಯಲ್ಲಿ ಗಣ್ಯರ ಆತಿಥ್ಯದ ಹೆಸರಿನಲ್ಲಿ ಆಗಿರುವ ಅಕ್ರಮದ ಕುರಿತು ಪರಿಶೀಲಿಸುತ್ತೇನೆ. ಆರೋಪಗಳು ಸರಿ ಇದ್ದರೆ ನಿರ್ಧಾರ ಕೈಗೊಳ್ಳಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.