ADVERTISEMENT

ಶ್ರೀರಂಗಪಟ್ಟಣ ಮಸೀದಿ ಸುತ್ತು ಹಾಕಲು ಅವಕಾಶ: ಕ್ರಮಕ್ಕೆ ಲಕ್ಷ್ಮಣ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 12:36 IST
Last Updated 25 ಡಿಸೆಂಬರ್ 2023, 12:36 IST
ಎಂ. ಲಕ್ಷ್ಮಣ
ಎಂ. ಲಕ್ಷ್ಮಣ   

ಮೈಸೂರು: ‘ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಭಾನುವಾರ ಆಯೋಜಿಸಿದ್ದ ಹನುಮಾನ್ ಮಾಲೆ ವಿಸರ್ಜನೆ ಮತ್ತು ಸಂಕೀರ್ತನಾ ಯಾತ್ರೆಯ ವೇಳೆ, ಜಾಮಿಯಾ ಮಸೀದಿ ಸುತ್ತು ಹಾಕಿ ಮೆರವಣಿಗೆ ನಡೆಸಲು ಅವಕಾಶ ಕೊಟ್ಟ ಅಲ್ಲಿನ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ನಾವು ಎಂದೂ ಈ ರೀತಿ ಮಸೀದಿ ಸುತ್ತುವ ‘ಸರ್ಕ್ಯೂಟ್‌ ಯಾತ್ರೆ’ಯನ್ನು ನೋಡಿಲ್ಲ. ಹನುಮಾನ್ ಮಾಲೆ ವಿಸರ್ಜನೆ, ಸಂಕೀರ್ತನೆ ಯಾತ್ರೆ ಹೆಸರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಸಮುದಾಯಗಳ ನಡುವೆ ಗಲಭೆ ಸೃಷ್ಟಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಹೇಗೆ ಅನುಮತಿ ನೀಡಲು ಸಾಧ್ಯ. ಬಹಳಷ್ಟು ಸಂಖ್ಯೆಯಲ್ಲಿ ಪೊಲೀಸರಿದ್ದರೂ ಇದನ್ನು ತಡೆಯಲಿಲ್ಲವೇಕೆ. ಅಧಿಕಾರಿ ವರ್ಗ ಇನ್ನೂ ಬಿಜೆಪಿ ನಿರ್ದೇಶನವನ್ನೇ ಪಾಲಿಸುತ್ತಿದ್ದೆಯೇ? ರಾಜ್ಯದಲ್ಲಿ ಇನ್ನೂ ಬಿಜೆಪಿ ಸರ್ಕಾರವೇ ಇದೆಯೇ?’ ಎಂದು ಕೇಳಿದರು.

‘ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇ 90ರಷ್ಟು ಮಂದಿ ಕರಾವಳಿ ಭಾಗದ ಆರ್‌ಎಸ್‌ಎಸ್‌ ಕಾರ್ಯಕರ್ತರೇ ಆಗಿದ್ದರು. ಯಾತ್ರೆಯಲ್ಲಿ ಪ್ರಭಾಕರ ಭಟ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಹಿಜಾಬ್‌ ನಿಷೇಧ ವಾಪಸ್‌ ತೆಗೆದುಕೊಳ್ಳಿ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೊಡೆ ತಟ್ಟಿ ಸವಾಲೆಸೆದಿದ್ದಾರೆ. ಈ ಬಗ್ಗೆ ಕ್ರಮ ಏಕಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಹಿಜಾಬ್‌ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಅಲ್ಲಿ ಸಕಾರಾತ್ಮಕ ತೀರ್ಪು ಬಂದರೆ ನಾವು ಸೂಕ್ತ ನಿರ್ಧಾರ ಕೈಗೊಂಡು ವಾಪಸ್‌ ತೆಗೆದುಕೊಳ್ಳುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಕೂಡಲೇ ಕೆಲವು ದಿನಗಳಿಂದ ಬಿಲದಲ್ಲಿದ್ದ ಬಿಜೆಪಿ ಮುಖಂಡರೆಲ್ಲರೂ ಮುಗಿಬಿದ್ದು ಹೇಳಿಕೆ ನೀಡುತ್ತಿರುವುದು ದುರಂತ’ ಎಂದು ಟೀಕಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.