ಮೈಸೂರು: ಇಲ್ಲಿನ ಜೆ.ಪಿ.ನಗರದ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.
ಜೆ.ಪಿ.ನಗರದ ಪೊಲೀಸ್ ಠಾಣೆ ಹಿಂಭಾಗದ ಸಿಎ ನಿವೇಶನದಲ್ಲಿ ಸಿದ್ದಲಿಂಗೇಶ್ವರ ಸ್ವಾಮಿ ಸಮಿತಿ ಟ್ರಸ್ಟ್‌ನಿಂದ ಕಟ್ಟಡ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಿ.ವೈ.ವಿಜಯೇಂದ್ರ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ನಿವೇಶನವನ್ನು ದೇವಾಲಯ ನಿರ್ಮಾಣಕ್ಕೆ ನೀಡಲಾಯಿತು. ಯಡಿಯೂರು ಮಾದರಿಯಲ್ಲಿ ಇಲ್ಲಿ ದೇವಾಲಯ ನಿರ್ಮಿಸಲಾಗುತ್ತಿರುವುದು ಹಾಗೂ ನಾನು ಶಿಲಾನ್ಯಾಸ ಮಾಡುತ್ತಿರುವುದು ಸಂತಸ ತಂದಿದೆ’ ಎಂದರು.
‘ವೀರಶೈವ ಲಿಂಗಾಯತ ದೊಡ್ಡ ಪರಂಪರೆ ಇರುವ ಸಮಾಜ. ಆಲದ ಮರದಂತೆ ಇತರ ಸಮಾಜಗಳಿಗೆ ನೆರಳು ಹಾಗೂ ಆಶ್ರಯ ಕೊಡುವ ಸಮಾಜ. ಇಂತಹ ಸಮಾಜದಲ್ಲಿ ಜನಿಸಿದ್ದು ನಮ್ಮ ಪುಣ್ಯ. ಇಲ್ಲಿ ನಮ್ಮ ಸಮಾಜ ದೊಡ್ಡ ಮಟ್ಟದಲ್ಲಿದ್ದು, ಉತ್ತಮ ಕೆಲಸ ಮಾಡಿಕೊಂಡು ಹೋಗಬೇಕು. ಎಲ್ಲ ಕ್ಷೇತ್ರದಲ್ಲಿಯೂ ಕಾಲು ಎಳೆಯುವವರು ಇದ್ದೇ ಇರುತ್ತಾರೆ. ಅದನ್ನು ಮೀರಿ ನಮ್ಮ ಕೆಲಸವನ್ನು ಮಾಡಬೇಕು’ ಎಂದು ಕಿವಿಮಾತು ಹೇಳಿದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಆಷಾಢದಲ್ಲಿ ಈ ಕೆಲಸ ನಡೆಯುತ್ತಿರುವುದು ಶ್ಲಾಘನೀಯ. ದೇಶದ ಹಲವು ಭಾಗಗಳಲ್ಲಿ ಸಂಚರಿಸಿ ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತಿದ ಸಿದ್ದಲಿಂಗೇಶ್ವರ ಸ್ವಾಮೀಜಿಗೆ ವರ್ಷದ 365 ದಿನವೂ ಶುಭ ದಿನ. ಕಗ್ಗೆರೆಯಲ್ಲಿ ತಮ್ಮ ಪವಾಡವನ್ನು ತೋರಿ, ಯಡಿಯೂರಿನಲ್ಲಿ ನೆಲೆ ನಿಂತು ಪ್ರಸಿದ್ಧಿಯನ್ನು ಪಡೆದರು. ತಾತ್ವಿಕ ತಳಹದಿಯ ಮೇಲೆ ಧರ್ಮವನ್ನು ಕಟ್ಟಿದವರು’ ಎಂದು ಸ್ಮರಿಸಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಎಂ. ಗಣೇಶ್‌ಪ್ರಸಾದ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಿರಂಜನ್, ಟ್ರಸ್ಟ್‌ನ ಗೌರವಾಧ್ಯಕ್ಷ ಎಸ್.ಸಿ.ಅಶೋಕ್, ಅಧ್ಯಕ್ಷ ಚಂದ್ರಶೇಖರಶೆಟ್ಟಿ, ನಗರಪಾಲಿಕೆ ಮಾಜಿ ಸದಸ್ಯ ಎಂ.ಪ್ರದೀಪ್‌ಕುಮಾರ್, ಈಶ್ವರ್, ಸಿದ್ದೇಶ್, ನಾಗೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.