ADVERTISEMENT

ಸಹಕಾರಿ ಬ್ಯಾಂಕ್‌ ಲೋಪ: ತನಿಖೆಗೆ ಆಗ್ರಹ

ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:33 IST
Last Updated 12 ಜನವರಿ 2026, 5:33 IST
ಹುಣಸೂರು ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಎಂಡಿಸಿಸಿ ಬ್ಯಾಂಕ್‌ ಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ದೊಡ್ಡಸ್ವಾಮಿಗೌಡ ಅವರನ್ನು ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಮತ್ತು ಕಾರ್ಯಕರ್ತರು ಅಭಿನಂದಿಸಿದರು.
ಹುಣಸೂರು ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಎಂಡಿಸಿಸಿ ಬ್ಯಾಂಕ್‌ ಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ದೊಡ್ಡಸ್ವಾಮಿಗೌಡ ಅವರನ್ನು ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಮತ್ತು ಕಾರ್ಯಕರ್ತರು ಅಭಿನಂದಿಸಿದರು.   

ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರಿ ಬ್ಯಾಂಕ್‌  35 ವರ್ಷಗಳಿಂದ ಒಂದೇ ವರ್ಗದ ಹಿಡಿತದಲ್ಲಿದ್ದು, ಈಗ ಕಾಂಗ್ರೆಸ್‌ ಪಕ್ಷದ ವಶವಾದಾಗ ಜಾತ್ಯತೀತ ವ್ಯವಸ್ಥೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆದಿದೆ ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್‌ ಹೇಳಿದರು.

ನಗರದ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಎಂಡಿಸಿಸಿ ಬ್ಯಾಂಕ್‌ ನೂತನ ಅಧ್ಯಕ್ಷ ದೊಡ್ಡಸ್ವಾಮಿಗೌಡರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹುಣಸೂರು ಕ್ಷೇತ್ರದಲ್ಲಿನ 27 ಸಹಕಾರಿ ಸಂಘಗಳಲ್ಲಿ 9 ಸಹಕಾರಿ ಸಂಘ ಸುಸ್ತಿಯಾಗಿವೆ. ಜಿಲ್ಲಾ ಸಹಕಾರಿ ಬ್ಯಾಂಕ್‌ ಠೇವಣಿ ಹಣ ₹ 400 ಕೋಟಿ ಇಂದ ₹900 ಕೋಟಿಗೆ ಹೆಚ್ಚಿಸಿದ್ದೇನೆ ಎಂದು ಕ್ಷೇತ್ರದ ಜನಪ್ರತಿನಿಧಿ ಹೇಳುತ್ತಿದ್ದರು ಎಂದು ಲೇವಡಿ ಮಾಡಿದರು.

ಜಿಲ್ಲಾ ಸಹಕಾರಿ ಬ್ಯಾಂಕ್‌ ಅಭಿವೃದ್ಧಿಗೊಳಿಸುವ ಹೆಸರಿನಲ್ಲಿ ಒಂದು ಕುಟುಂಬದ ಹಿಡಿತದಲ್ಲಿ ಸಿಲುಕಿ ಒಂದೇ ವರ್ಗಕ್ಕೆ ಬೇಕಾದ ಎಲ್ಲಾ ಸವಲತ್ತು ಬಳಸಿಕೊಂಡಿದ್ದರು. ಹಿಂದುಳಿದ ಸಮುದಾಯಗಳಿಗೆ ಯಾವುದೇ ಸವಲತ್ತು ಇಲ್ಲವಾಗಿತ್ತು ಎಂದು ದೂರಿದರು.

ADVERTISEMENT

ತನಿಖೆ: ನೂತನ ಅಧ್ಯಕ್ಷರ ನೇತೃತ್ವದಲ್ಲಿ ತಾಲ್ಲೂಕಿನ ಸಹಕಾರಿ ಸಂಘಗಳ ಆಂತರಿಕ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಯಬೇಕು. ಕ್ಷೇತ್ರದ 9 ಸಹಕಾರಿ ಬ್ಯಾಂಕ್‌ ಕಾರ್ಯದರ್ಶಿಗಳಿಂದ ಹಣ ದುರುಪಯೋಗವಾಗಿದ್ದು ಅವರ ವಿರುದ್ಧ  ಕ್ರಮವಾಗಬೇಕು. ಸಹಕಾರಿ ಕ್ಷೇತ್ರದಲ್ಲಿ ಹಣ ದುರುಪಯೋಗ ಮಾಡಿದವರ ವಿರುದ್ಧ ತನಿಖೆ ಚುರುಕುಗೊಳಿಸಿ ಶಿಕ್ಷೆ ನೀಡಬೇಕು. ಈ ಕ್ಷೇತ್ರದಲ್ಲಿ ಶಿಕ್ಷೆಗೆ ಒಳಪಟ್ಟವರ ಸಂಖೆ ವಿರಳ. ಹೀಗಾಗಿ ಪ್ರಕರಣ ಹೆಚ್ಚಾಗಿದ್ದು, ಈ ಎಲ್ಲಕ್ಕೂ ಕಡಿವಾಣ ಹಾಕಬೇಕು ಎಂದರು.

 ಹುಣಸೂರು ಕ್ಷೇತ್ರದ ಜನಪ್ರತಿನಿಧಿಗೆ ಸಹಕಾರಿ ಕ್ಷೇತ್ರ ಹೊರತುಪಡಿಸಿ,ಇತರ ಯಾವುದೇ ಘಟನೆಗಳ ಬಗ್ಗೆ  ಕಾಳಜಿ ಇಲ್ಲ. ಇಲ್ಲಿ ಸುಲಿಗೆ, ದರೋಡೆ, ಸಾಮಾಜಿಕ ಸಮಸ್ಯೆಗಳಿದ್ದರೂ ಅಧಿಕಾರಿಗಳ ಸಭೆ ನಡೆಸಿ ವಿಚಾರಿಸುವ ಪ್ರಯತ್ನ ನಡೆದಿಲ್ಲ ಎಂದರು.

 ಕುರುಬ ಸಮಾಜದ ಅಧ್ಯಕ್ಷ ಕುನ್ನೇಗೌಡ, ಅಣ್ಣಯ್ಯ ನಾಯಕ ಮಾತನಾಡಿದರು.  ಬಿ.ಜಯರಾಂ, ಸಣ್ಣೇಗೌಡ, ದೇವರಾಜ್‌, ರವಿಪ್ರಸನ್ನ, ರಮೇಶ್‌, ಅಜ್ಗರ್‌ ಪಾಶಾ, ಶಿರೇನಹಳ್ಳಿ ಬಸವರಾಜು,ಬಾಲಸುಂದರ್‌, ರಂಗ ಕರ್ಮಿ ಜಯರಾಮ್‌ ನಿರೂಪಿಸಿದರು.

‘ಪ್ರಥಮ ಸಭೆ 19ರಂದು

’ದೊಡ್ಡಸ್ವಾಮಿಗೌಡ ಮಾತನಾಡಿ ಎರಡೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 317 ಸಹಕಾರಿ ಬ್ಯಾಂಕ್‌ ಇದ್ದು ಈ ಪೈಕಿ ₹ 83 ಕೋಟಿ ಸುಸ್ತಿಯಲ್ಲಿವೆ. ಹುಣಸೂರು ಕ್ಷೇತ್ರದ 27 ಸಹಕಾರಿ ಬ್ಯಾಂಕ್‌ ಗಳಲ್ಲಿ ₹ 27 ಕೋಟಿ ಸುಸ್ತಿ ಇದೆ. ಜ. 19 ರಂದು ನಡೆಯಲಿರುವ ಪ್ರಥಮ ಸಭೆಯಲ್ಲಿ ವಿಷಯ ಚರ್ಚಿಸಿ ವಸೂಲಾತಿಗೆ ಕ್ರಮವಹಿಸುವೆ ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರ ಸಹಕಾರಿ ಸಂಘದ ರೈತರಿಗೆ ₹ 5 ಲಕ್ಷ  ಬಡ್ಡಿ ರಹಿತ ಕೃಷಿ ಸಾಲ ಯೋಜನೆ ಜಾರಿಗೊಳಿಸಿದ್ದು ಅವಶ್ಯಕ ಇರುವವರಿಗೆ ಈ ಸಾಲ ನೀಡುತ್ತಿಲ್ಲ.  ಕ್ರಮಕ್ಕೆ ಸೂಚಿಸುವೆ. ಕ್ಷೇತ್ರದ 9 ಸಹಕಾರಿ ಸಂಘಗಳಿಗೆ ಚುನಾವಣೆ ನಡೆಯದೆ ಆಡಳಿತಾಧಿಕಾರಿ ನಿಯೋಜಿಸಿದ್ದು  ಶೀಘ್ರದಲ್ಲೇ ಚುನಾವಣೆ ನಡೆಸುವೆ. ಮೈಸೂರು ಜಿಲ್ಲಾ ಸಹಕಾರಿ ಬ್ಯಾಂಕ್‌ ಕೃಷಿ ಕ್ಷೇತ್ರಕ್ಕೆ ₹1350 ಕೋಟಿ ಸಾಲ ನೀಡಿದ್ದು ಕೃಷಿಯೇತರ ಕ್ಷೇತ್ರಕ್ಕೆ ₹ 650 ಕೋಟಿ ಸಾಲ ನೀಡಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಯು ಕಾಂಗ್ರೆಸ್‌ ಪಕ್ಷದ ಕಟ್ಟಾ ಬೆಂಬಲಿಗ160 ಕುಟುಂಬಗಳಿಗೆ ತಲಾ ₹ 10 ಲಕ್ಷದಂತೆ ಬಡ್ಡಿ ರಹಿತ ಸಾಲ ಮಂಜೂರು ಮಾಡಿ ಮತ ಓಲೈಕೆ ಮಾಡಿದ್ದರಿಂದ ಪಕ್ಷ ಇಲ್ಲಿ ಸೋಲು ಅನುಭವಿಸಿದೆ. ಸಹಕಾರಿ ಕ್ಷೇತ್ರವನ್ನು ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳಲಾಗಿದೆ.
–ಎಚ್.ಪಿ.ಮಂಜುನಾಥ್‌, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.