ADVERTISEMENT

ಮೈಸೂರು: ಬೆಳಕಿನ ಹಬ್ಬಕ್ಕೆ ಕೋವಿಡ್ ಕರಿನೆರಳು

ದೀಪಾವಳಿ ಹಬ್ಬದ ಸಂಭ್ರಮ ಮನೆಗಷ್ಟೇ ಸೀಮಿತ: ಜನರ ಓಡಾಟದಲ್ಲಿ ಹೆಚ್ಚಳ

ಡಿ.ಬಿ, ನಾಗರಾಜ
Published 15 ನವೆಂಬರ್ 2020, 3:02 IST
Last Updated 15 ನವೆಂಬರ್ 2020, 3:02 IST
ಮೈಸೂರಿನ ಜೆ.ಕೆ.ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ಶನಿವಾರ ತೆರೆಯಲಾಗಿದ್ದು, ಸಾರ್ವಜನಿಕರು ಪಟಾಕಿ ಖರೀದಿಸಿದರು (ಎಡಚಿತ್ರ) ಆಕಾಶಬುಟ್ಟಿ ವೀಕ್ಷಿಸಿದ ಗೃಹಿಣಿ  –ಪ್ರಜಾವಾಣಿ ಚಿತ್ರಗಳು: ಬಿ.ಆರ್.ಸವಿತಾ
ಮೈಸೂರಿನ ಜೆ.ಕೆ.ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ಶನಿವಾರ ತೆರೆಯಲಾಗಿದ್ದು, ಸಾರ್ವಜನಿಕರು ಪಟಾಕಿ ಖರೀದಿಸಿದರು (ಎಡಚಿತ್ರ) ಆಕಾಶಬುಟ್ಟಿ ವೀಕ್ಷಿಸಿದ ಗೃಹಿಣಿ  –ಪ್ರಜಾವಾಣಿ ಚಿತ್ರಗಳು: ಬಿ.ಆರ್.ಸವಿತಾ   

ಮೈಸೂರು: ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಆರಂಭವಾಗಿದೆ. ಕೋವಿಡ್‌ನ ಆತಂಕದ ನಡುವೆಯೂ ಜನರ ಓಡಾಟ ಹೆಚ್ಚಿದೆ. ಬಹುತೇಕರ ಮನೆಗಳಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.

ವ್ಯಾಪಾರ–ವಹಿವಾಟು ತುಸು ಬಿರುಸುಗೊಂಡಿವೆ. ಉದ್ಯಮ–ವ್ಯಾಪಾರ ವಲಯದ ಚಟುವಟಿಕೆಗಳು ಹಲವು ತಿಂಗಳ ಬಳಿಕ ಗರಿಗೆದರಿವೆ. ಶಾಪಿಂಗ್‌ ಮಾಲ್‌, ಬಟ್ಟೆ ಅಂಗಡಿಗಳಲ್ಲಿ ಜನದಟ್ಟಣೆ ಗೋಚರಿಸಿದೆ.

ಶನಿವಾರ ನರಕ ಚತುದರ್ಶಿ. ಬಹುತೇಕರು ಮುಂಜಾನೆಯೇ ಅಭ್ಯಂಜನ ಸ್ನಾನಗೈದರು. ಹಬ್ಬದ ವಿಶೇಷ ಪೂಜೆ ಸಲ್ಲಿಸಿ, ಧಾರ್ಮಿಕ ಸಂಪ್ರದಾಯ ಪಾಲಿಸುವ ಮೂಲಕ ದೀಪಾವಳಿ ಆಚರಣೆಗೆ ಮುನ್ನುಡಿ ಬರೆದರು. ಮಾರವಾಡಿ ಸಮುದಾಯ ವಿಜೃಂಭಣೆಯಿಂದ ಹಬ್ಬ ಆಚರಿಸಿದೆ.

ADVERTISEMENT

ಭಾನುವಾರ ಅಮಾವಾಸ್ಯೆ. ಅನೇಕರು ಅಮಾವಾಸ್ಯೆ ದಿನದಂದೇ ಲಕ್ಷ್ಮೀ ಪೂಜೆ ಮಾಡುವುದರಿಂದ ಶನಿವಾರವೇ ಹೂವು–ಹಣ್ಣು ಖರೀದಿ
ಗಾಗಿ ಮಾರುಕಟ್ಟೆಗೆ ದಾಂಗುಡಿಯಿಟ್ಟರು. ದರವೂ ತುಸು ಏರಿಕೆಯಾಗಿತ್ತು. ಸೋಮವಾರ ಬಲಿಪಾಡ್ಯಮಿ. ಬಹುತೇಕರು ಈ ದಿನದಂದು ತಮ್ಮ ಕುಟುಂಬದ ಪೂರ್ವಿಕರನ್ನು ಪೂಜಿಸುವ ಹಿರಿಯರ ಪೂಜೆ ಮಾಡುತ್ತಾರೆ. ಜೊತೆಗೆ ಲಕ್ಷ್ಮೀ ಪೂಜೆಯನ್ನು ಮಾಡುವುದು ವಿಶೇಷ.

‘ಶನಿವಾರದಿಂದಲೇ ಮನೆಯ ಮುಂಭಾಗ ಹಣತೆ ಹಚ್ಚುವ ಮೂಲಕ ದೀಪಾವಳಿಗೆ ಮುನ್ನುಡಿ ಬರೆದಿದ್ದೇವೆ. ಭಾನುವಾರ ಅಮಾವಾಸ್ಯೆ ಪೂಜೆ. ಸೋಮವಾರ ಹಬ್ಬ. ಲಕ್ಷ್ಮೀ ಪೂಜೆಯನ್ನು ಮಾಡುತ್ತೇವೆ. ಕಾರ್ತಿಕ ಮಾಸ ಮುಗಿಯುವ ತನಕವೂ ನಿತ್ಯ ಮುಸ್ಸಂಜೆ ವೇಳೆ ಮನೆಯ ಮುಂಭಾಗ ಹಣತೆ ಬೆಳಗಿಸುತ್ತೇವೆ’ ಎಂದು ವಿಜಯನಗರ ನಿವಾಸಿ ಕಾವ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹೂವಿನ ಆವಕ; ಧಾರಣೆ ಸ್ಥಿರ: ‘ದೀಪಾವಳಿ ಹಬ್ಬಕ್ಕಾಗಿಯೇ ತಮಿಳುನಾಡು, ಶ್ರೀರಂಗಪಟ್ಟಣ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಭಾಗದಿಂದ ಮೈಸೂರಿನ ಮಾರುಕಟ್ಟೆಗೆ ಹೂವು ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಇದರಿಂದ ಧಾರಣೆಯಲ್ಲಿ ಹೆಚ್ಚಳವಾಗಿಲ್ಲ’ ಎಂದು ಹೂವಿನ ವ್ಯಾಪಾರಿ ಎನ್.ಮಂಜುನಾಥ್ ತಿಳಿಸಿದರು.

ಮಲ್ಲಿಗೆ ಒಂದು ಕೆ.ಜಿ.ಗೆ ₹ 600–₹ 700, ಮರಲೆ ₹ 500–₹ 600, ಕಾಕಡ ₹ 300–₹ 350, ಕನಕಾಂಬರ ₹ 500–₹600, ಚೆಂಡು ಹೂವು ಕೆ.ಜಿ.ಗೆ ₹ 50–₹60 ಇದ್ದರೆ, ಸೇವಂತಿಗೆ ಒಂದು ಮಾರು ಹೂವಿಗೆ ₹ 50–₹ 60 ಇದೆ ಎಂದು ಮಾಹಿತಿ ನೀಡಿದರು.

‘ಸತತ ವರ್ಷಧಾರೆಯಿಂದಾಗಿ ಆಯುಧಪೂಜೆ ಸಂದರ್ಭ ಮಾರುಕಟ್ಟೆಗೆ ಹೂವು ಹೆಚ್ಚಿಗೆ ಬಂದಿರಲಿಲ್ಲ. ಇದರಿಂದ ಧಾರಣೆಯಲ್ಲಿ ಭಾರಿ ಹೆಚ್ಚಳವಾಗಿತ್ತು. ಇದೀಗ ಎಲ್ಲೆಡೆಯಿಂದ ಹೂವು ಹೆಚ್ಚಿಗೆ ಆವಕವಾಗಿದೆ. ಗ್ರಾಹಕರು ಖುಷಿಯಿಂದ ಖರೀದಿ ನಡೆಸಿದ್ದಾರೆ. ಲಕ್ಷ್ಮೀ ಅಲಂಕಾರಕ್ಕೆ ನಾನಾ ಬಗೆಯ ಹೂವನ್ನು ಖರೀದಿಸಿದವರೇ ಹೆಚ್ಚು. ಆದರೂ ಹಿಂದಿನ ವರ್ಷದ ಜನದಟ್ಟಣೆ ಗೋಚರಿಸಲಿಲ್ಲ’ ಎಂದು ಅವರು ಹೇಳಿದರು.

ಪಟಾಕಿ: ನಷ್ಟದ ಹೊಣೆ ಹೊರುವವರು ಯಾರು?

‘ಯುಗಾದಿಯಿಂದಲೂ ಒಂದು ರೂಪಾಯಿ ಆದಾಯವಿಲ್ಲ. ಒಂದೂವರೆ ತಿಂಗಳ ಹಿಂದೆ ಪಟಾಕಿ ಮಾರಾಟಕ್ಕೆ ಅನುಮತಿ ಕೊಡುವುದಾಗಿ ರಾಜ್ಯ ಸರ್ಕಾರವೇ ತಿಳಿಸಿತ್ತು. ಅದರಂತೆ ಲಕ್ಷ, ಲಕ್ಷ ಬಂಡವಾಳ ಹಾಕಿ ಪಟಾಕಿ ತಂದಿದ್ದೇವೆ. ಉತ್ಪಾದನೆ, ಮಾರಾಟದ ಸಂದರ್ಭದಲ್ಲಿ ಸುಮ್ಮನಿದ್ದ ಸರ್ಕಾರ ಇದೀಗ ಕ್ರಮಕ್ಕೆ ಮುಂದಾಗಿದೆ.

ಮಾಲಿನ್ಯಕಾರಕ, ಹಾನಿಕಾರಕ ಎಂದೆಲ್ಲಾ ಪಟಾಕಿ ಮಾರಾಟ, ಸಿಡಿಸುವುದನ್ನೇ ನಿಷೇಧಿಸುವ ಮೂಲಕ ನಮ್ಮನ್ನು ಬಲಿ ಹಾಕಲು ಮುಂದಾಗಿದೆ. ಇದರಿಂದ ನಮಗಾಗುವ ನಷ್ಟದ ಹೊಣೆಯನ್ನು ಹೊರುವವರು ಯಾರು?’ ಎಂಬುದು ನಗರದ ಪಟಾಕಿ ಮಾರಾಟಗಾರರ ಅಳಲಾಗಿದೆ.

‘ಬ್ಯಾಂಕ್‌ನಿಂದ ಪಡೆದಿರುವ ₹ 30 ಲಕ್ಷ ಒಡಿ ಮೊತ್ತಕ್ಕೆ ಇದೂವರೆಗೂ ಬಡ್ಡಿ ಕಟ್ಟಿಲ್ಲ. ಮನೆಯಲ್ಲಿನ ಚಿನ್ನಾಭರಣ ಒತ್ತೆಯಿಟ್ಟಿದ್ದಾಗಿದೆ. ಇದರ ನಡುವೆಯೂ ಸಾಲ ಮಾಡಿ, ಲಕ್ಷ–ಲಕ್ಷ ಬಂಡವಾಳ ಹಾಕಿ ಪಟಾಕಿ ತಂದಿದ್ದೇವೆ. ಇದೀಗ ನಿಷೇಧ ಹೇರಿದರೆ ನಮ್ಮ ನಷ್ಟದ ಹೊಣೆ ಹೊರುವವರು ಯಾರು? ಕೋವಿಡ್‌ ಪರೋಕ್ಷವಾಗಿ ಕೊಂದರೆ, ಸರ್ಕಾರ ನಮ್ಮನ್ನು ನೇರವಾಗಿಯೇ ಕೊಲ್ಲಲು ಮುಂದಾಗಿದೆ. ಯಾರ ಬಳಿ ನಮ್ಮ ಸಮಸ್ಯೆ ಹೇಳಿಕೊಂಡರೇ ಆಗುವ ಪ್ರಯೋಜನವಾದರೂ ಏನು?’ ಎಂಬ ಅಸಮಾಧಾನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಪಟಾಕಿ ಮಾರಾಟಗಾರ ಹರೀಶ್‌ಬಾಬು ಅವರದ್ದು.

100 ಹೆಚ್ಚುವರಿ ಬಸ್

‘ಜನರ ಸಂಚಾರ ಹೆಚ್ಚಿದೆ. ಹಬ್ಬದ ದಿನಗಳಲ್ಲಿ ಜನರ ಸುಗಮ–ಸುರಕ್ಷಿತ ಪ್ರಯಾಣಕ್ಕಾಗಿಯೇ ಮೈಸೂರು ಗ್ರಾಮಾಂತರ ವಿಭಾಗದಿಂದ 100 ಹೆಚ್ಚುವರಿ ಬಸ್‌ಗಳನ್ನು ಶುಕ್ರವಾರ ರಾತ್ರಿಯಿಂದಲೇ ಓಡಿಸಲಾಗುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಮಿಳುನಾಡಿಗೆ 15 ಬಸ್ ಸಂಚರಿಸುತ್ತಿವೆ. ಕೇರಳ, ಹೈದರಾಬಾದ್, ಸಿಕಂದರಾಬಾದ್‌, ಬೆಂಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ಬೇಡಿಕೆ ಬಂದ ಕಡೆಗೆ ಬಸ್‌ ಓಡಿಸಲಾಗುತ್ತಿದೆ. ಸೋಮವಾರದವರೆಗೂ ಹೆಚ್ಚುವರಿ ಬಸ್‌ಗಳ ಓಡಾಟವಿರಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.