ADVERTISEMENT

ರಜೆ ತೆಗೆದುಕೊಳ್ಳದ ಅಧಿಕಾರಿ: ಕೊರೊನಾ ಬಂದ ನಂತರ ನಿತ್ಯ ಕೆಲಸ

ಕೆ.ಎಸ್.ಗಿರೀಶ್
Published 21 ಆಗಸ್ಟ್ 2020, 9:09 IST
Last Updated 21 ಆಗಸ್ಟ್ 2020, 9:09 IST
   

ಮೈಸೂರು: ಕೋವಿಡ್ ಬಂದ ನಂತರ ಒಂದು ದಿನವೂ ರಜೆ ತೆಗೆದುಕೊಳ್ಳದ, ಜುಬಿಲೆಂಟ್ ಕಾರ್ಖಾನೆಯ ನೌಕರರಿಗೆ ಕೊರೊನಾ ಸೋಂಕು ಹರಡಿದಾಗ ಯಶಸ್ವಿಯಾಗಿ ನಿಯಂತ್ರಿಸಿದ ಅಧಿಕಾರಿ ಶವವಾಗಿದ್ದಾರೆ. ಜಿಲ್ಲೆಯಲ್ಲಿ ಇದು 4ನೇ ವೈದ್ಯಾಧಿಕಾರಿಯ ಸಾವು. ಮುಂದೆಷ್ಟು ಮಂದಿ...?

ಗುರುವಾರ ಆತ್ಮಹತ್ಯೆ ಮಾಡಿಕೊಂಡ ನಂಜನಗೂಡಿನ ಪ್ರಭಾರ ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಪಾರ್ಥೀವ ಶರೀರ ದರ್ಶನಕ್ಕೆ ಬಂದ ವೈದ್ಯಕೀಯ ಸಿಬ್ಬಂದಿಯನ್ನು ಹೀಗೊಂದು ಪ್ರಶ್ನೆ ಕಾಡಿತು. ‘ಕೆಲಸದ ಒತ್ತಡಕ್ಕೆ ಮಿತಿ ಎಂಬುದಿಲ್ಲವೇ’ ಎಂದು ಅಲ್ಲಿದ್ದವರು ಪ್ರಶ್ನಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

‘ಕೊರೊನಾ ಬಂದ ನಂತರ ನಾಗೇಂದ್ರ ಅವರು ಇಲ್ಲಿಯವರೆಗೆ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಜುಬಿಲೆಂಟ್ ಕಾರ್ಖಾನೆಯ ನೌಕರರಿಗೆ ಕೊರೊನಾ ಸೋಂಕು ತಗುಲಿದಾಗ ಒಂದೇ ಒಂದು ಸಾವು ಸಂಭವಿಸದ ರೀತಿ ನೋಡಿಕೊಂಡಿದ್ದಾರೆ. ಸೋಂಕು ಹರಡುವುದನ್ನು ಯಶಸ್ವಿಯಾಗಿ ತಡೆದಿದ್ದಾರೆ. ಇಂತಹ ಅಧಿಕಾರಿಗೆ ಹೀಗಾದರೆ ಉಳಿದವರ ಗತಿ ಏನು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ಡಾ.ರವೀಂದ್ರ ಅವರು ಸಚಿವ ಕೆ.ಸುಧಾಕರ್ ಅವರನ್ನು ಪ್ರಶ್ನಿಸಿದರು.

ADVERTISEMENT

ಕೊರೊನಾ ಸೋಂಕು ಹರಡಬಹುದು ಎಂಬ ಭೀತಿಯಿಂದ ಮನೆಯಲ್ಲಿ ಅಂದಿನಿಂದಲೇ ಪತ್ನಿ ಮತ್ತು ಮಗುವಿನಿಂದ ಪ್ರತ್ಯೇಕ ಕೋಣೆಯಲ್ಲಿ ವಾಸವಾಗಿದ್ದಾರೆ. ಇಂತಹವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಏಕವಚನದಲ್ಲಿ ನಿಂದಿಸಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿಯೇ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

‘ರ‍್ಯಾಪಿಟ್ ಆ್ಯಂಟಿಜನ್‌ ಟೆಸ್ಟ್‌’ಗೆ ನಿತ್ಯ 300 ಎಂದು ಗುರಿ ನಿಗದಿಪಡಿಸಿ, ಸಿಬ್ಬಂದಿಯನ್ನು ಕೊಡದೇ ಹೋದರೆ ವೈದ್ಯಾಧಿಕಾರಿ ಏನು ಮಾಡಬೇಕು. ಇವರಿಗೆ ಪರೀಕ್ಷೆಯ ಕಿಟ್‌ ಖಾಲಿಯಾಗುವುದು ಮುಖ್ಯವೋ, ಕೊರೊನಾ ನಿಯಂತ್ರಣ ಮುಖ್ಯವೋ, ಸಿಇಒ ಬೇಕಾ, ವೈದ್ಯರು ಬೇಕಾ’ ಎಂದು ತರಾಟೆಗೆ ತೆಗೆದುಕೊಂಡರು.

ಕೆಲಸದ ಒತ್ತಡ ಕಾರಣ– ಸಚಿವ ಸುಧಾಕರ

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು, ‘ಆರು ತಿಂಗಳಿಂದ ರಜೆ ಹಾಕದೆ ಸತತವಾಗಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ್ದರಿಂದ ಖಿನ್ನತೆಗೆ ಒಳಗಾಗಿದ್ದರಿಂದ ಆತ್ಮಹತ್ಯೆಯಂತಹ ಘಟನೆ ಸಂಭವಿಸಿದೆ. ಘಟನೆ ಕುರಿತು ತನಿಖೆಯ ಸ್ವರೂಪವನ್ನು ಶುಕ್ರವಾರ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

ವೈದ್ಯಕೀಯ ಸಿಬ್ಬಂದಿಯ ಕಾರ್ಯದೊತ್ತಡ ಕಡಿಮೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಕಾರ್ಯಕ್ರಮ ರೂಪಿಸಲಾಗುವುದು. ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.