ADVERTISEMENT

ಕ್ರಿಕೆಟ್ ಬೆಟ್ಟಿಂಗ್; 9 ಮಂದಿ ಬಂಧನ

ವಿಜಯನಗರ ಠಾಣಾ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 5:27 IST
Last Updated 5 ಏಪ್ರಿಲ್ 2019, 5:27 IST
   

ಮೈಸೂರು: ನಗರದ ಹೂಟಗಳ್ಳಿಯ ಮನೆಯೊಂದರ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ವಿಜಯನಗರ ಠಾಣೆ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 9 ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ ₹ 4,800 ಹಣ, ಒಂದು ಟಿ.ವಿ ಹಾಗೂ 4 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನಿವಾಸಿಗಳಾದ ಮಂಜುನಾಥ್, ಶೇಖರ್, ವಿಶ್ವಾಸ, ನಕುಲ್, ವಿಲಾಸ್, ನಾಗರಾಜು, ಸೋಮೇಶ್, ಗುರು ಬಂಧಿತರು. ಬಂಧಿತರೆಲ್ಲರೂ 20ರಿಂದ 23ರ ವಯೋಮಾನದವರಾಗಿದ್ದಾರೆ. ಇವರಲ್ಲಿ ಕೆಲವರು ಕಾರ್ಖಾನೆಯ ಕಾರ್ಮಿಕರು ಹಾಗೂ ಮತ್ತೆ ಕೆಲವರು ಆಟೊ ಚಾಲಕರು ಇದ್ದಾರೆ.

ಮನೆಯೊಂದರಲ್ಲಿ ಹುಡುಗರೆಲ್ಲ ಸೇರಿಕೊಂಡು ಮದ್ಯಪಾನ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಐಪಿಎಲ್‌ ಪಂದ್ಯ ನಡೆಯುತ್ತಿದ್ದ ಸಮಯಕ್ಕೆ ಸರಿಯಾಗಿ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ ಮೊಬೈಲ್‌ನಲ್ಲಿ ಬೆಟ್ಟಿಂಗ್‌ ಆಡುತ್ತಿದ್ದುದ್ದು ಕಂಡು ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇನ್‌ಸ್ಪೆಕ್ಟರ್ ಕುಮಾರ್, ಸಿಬ್ಬಂದಿಯಾದ ಶಂಕರ್, ಆರಾಧ್ಯ, ಈಶ್ವರ್, ಶ್ರೀನಿವಾಸ್ ಹಾಗೂ ಇತರರು ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.