
ಜೈಲು (ಪ್ರಾತಿನಿಧಿಕ ಚಿತ್ರ)
ಮೈಸೂರು: ನಂಜನಗೂಡು ತಾಲ್ಲೂಕಿನ ಮಾಡ್ರಲ್ಲಿ ಗ್ರಾಮದಲ್ಲಿ ನಡೆದ ಮಹದೇವ ಅವರ ಕೊಲೆ ಪ್ರಕರಣದ ಅಪರಾಧಿಗಳಾದ ಅದೇ ಗ್ರಾಮದ ನಂಜುಂಡಸ್ವಾಮಿ ಹಾಗೂ ಮಹದೇವಸ್ವಾಮಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಗ್ರಾಮದ ಪವಿತ್ರಾ ಅವರು ಮದುವೆಯಾಗಿದ್ದರು. ಅವರ ವಿವಾಹವನ್ನು ಮಲ್ಲೇಶ್ ಮಾಡಿಸಿದ್ದಾರೆ ಎಂದು ಗ್ರಾಮದಲ್ಲಿ ಪಂಚಾಯಿತಿ ನಡೆಸಲಾಗಿತ್ತು. ಆಗ ಮಹದೇವಸ್ವಾಮಿ ಮತ್ತು ನಂಜುಂಡಸ್ವಾಮಿ ಮಲ್ಲೇಶ್‌ಗೆ ಬೆಂಬಲವಾಗಿ ಮಾತನಾಡಿದ್ದರು. ಈ ವೇಳೆ ನಿಂಗಯ್ಯ ಎಂಬುವವರು, ‘ನೀವ್ಯಾಕೆ ಆತನನ್ನು ಬೆಂಬಲಿಸುತ್ತೀರಿ’ ಎಂದು ಪ್ರಶ್ನಿಸಿದ್ದರು.
ನಂತರ 2020ರ ಆಗಸ್ಟ್ 1ರಂದು ರಾತ್ರಿ ನಿಂಗಯ್ಯ ಅವರು ಮಹದೇವಸ್ವಾಮಿ, ನಂಜುಂಡಸ್ವಾಮಿ ಹಾಗೂ ಅವರ ಸ್ನೇಹಿತ ಸೋಮಶೇಖರನೊಂದಿಗೆ ಅಂಗನವಾಡಿ ಕಡೆಗೆ ಹೋಗುತ್ತಿದ್ದುದನ್ನು ಕಂಡು, ‘ನೀವು ಅಲ್ಲಿ ಕುಡಿದು, ತಿಂದು ಗಲೀಜು ಮಾಡುತ್ತೀರಿ’ ಎಂದು ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ಅವರು ಪದೇ ಪದೇ ಪ್ರಶ್ನಿಸುತ್ತಾನೆ ಎಂಬ ದ್ವೇಷದಿಂದ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಹಲ್ಲೆ ಪ್ರಶ್ನಿಸಿದ ನಿಂಗಯ್ಯ ಅವರ ಸಹೋದರ ಮಹದೇವ ಅವರಿಗೂ ಚಾಕುವಿನಿಂದ ಇರಿದಿದ್ದರು. ಮಹದೇವ ಮೃತಪಟ್ಟಿದ್ದರು.
ಈ ಸಂಬಂಧ ನಂಜನಗೂಡಿನ ಕವಲಂದೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಸೋಮಶೇಖರ್ ಮೃತಪಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ ಸೋಮಕ್ಕಳವರ ಉಳಿದಿಬ್ಬರು ಆರೋಪಿಗಳಿಗೆ 7 ವರ್ಷ ಜೈಲು, ₹4,500 ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.
ಮಾಲೀಕನ ಕೊಲೆ: ಕಾರ್ಮಿಕನಿಗೆ ಜೀವಾವಧಿ ಶಿಕ್ಷೆ
ಮೈಸೂರು: ಬೆಳ್ಳಿ ಆಸೆಗಾಗಿ ಕೆಲಸ ನೀಡಿದ ಮಾಲೀಕ ಗೋವಿಂದ ಅವರನ್ನು ಕೊಲೆ ಮಾಡಿದ ಕಾರ್ಮಿಕ ಅರ್ಜುನ್ ಕುಮಾರ್‌ಗೆ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಹಳ್ಳದಕೇರಿಯ ಬಳಿ ಸುಮತಿನಾಥ ಜೈನ ಮಂದಿರ ಟ್ರಸ್ಟ್‌ಗೆ ಸೇರಿದ ಜ್ಞಾನ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಮಂದಿರಲ್ಲಿದ್ದ ಮರದ ಸಿಂಹಾಸನಕ್ಕೆ ಬೆಳ್ಳಿ ಕವಚ ತೊಡಿಸುವ ಕಾರ್ಯಕ್ಕೆ ಟ್ರಸ್ಟ್‌ನವರು ಗೋವಿಂದ ಅವರಿಗೆ ದಾನದಿಂದ ಸಂಗ್ರಹಿಸಿದ್ದ 14 ಕೆ.ಜಿ ಬೆಳ್ಳಿ ನೀಡಿದ್ದರು. ಕವಚ ನಿರ್ಮಾಣ ಕಾರ್ಯಕ್ಕಾಗಿ ಗೋವಿಂದ ಅವರು ಸಹಾಯಕರಾಗಿ ಅರ್ಜುನ್‌ಕುಮಾರ್‌ನನ್ನು ನೇಮಿಸಿಕೊಂಡಿದ್ದರು.
ಬೆಳ್ಳಿಯನ್ನು ಕದಿಯಲು ಸಂಚು ರೂಪಿಸಿದ ಅರ್ಜುನ್‌ಕುಮಾರ್, ಅವರ ತಲೆಗೆ ಮರದ ಪಟ್ಟಿಯಿಂದ ಹೊಡೆದು, ಕೋಣೆಯಲ್ಲಿ ಇಟ್ಟಿದ್ದ ಸೀಲಿಂಗ್ ಫ್ಯಾನ್ ಅನ್ನು ತಲೆಯ ಮೇಲೆ ಇಟ್ಟು ಫ್ಯಾನ್ ಬಿದ್ದು ಮೃತಪಟ್ಟಿದ್ದಾರೆ ಎಂದು ಬಿಂಬಿಸಿ ಬೆಳ್ಳಿಯ ಗಟ್ಟಿಯೊಂದಿಗೆ ಪರಾರಿಯಾಗಿದ್ದ.
ಟ್ರಸ್ಟ್‌ನವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಲಷ್ಕರ್ ಠಾಣೆ ಪೊಲೀಸರು, ಆರೋಪಿ ಅರ್ಜುನ್‌ಕುಮಾರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶ ಗುರುರಾಜ ಸೋಮಕ್ಕಳವರ್ ವಿಚಾರಣೆ ನಡೆಸಿ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹ 8 ಸಾವಿರ ದಂಡ ವಿಧಿಸಿದ್ದಾರೆ. ಟಿ.ಎಚ್.ಲೋಲಾಕ್ಷಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.