ADVERTISEMENT

ಕಾಡು ಪ್ರಾಣಿ ಹಾವಳಿಗೆ ಕಡಿವಾಣ ಹಾಕಿ

ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:26 IST
Last Updated 26 ಜುಲೈ 2025, 7:26 IST
ಅರಣ್ಯದಂಚಿನ ಪ್ರಾಣಿ ಹಾವಳಿ ಮತ್ತು ಒಕ್ಕಲೆಬ್ಬಿಸುವ ತಂತ್ರಗಾರಿಕೆ ವಿರೋಧಿಸಿ ಹುಣಸೂರು ನಗರದ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರ ಕಚೇರಿ ಎದುರು ಶುಕ್ರವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಹೊಸೂರು ಕುಮಾರ್‌ ಭಾಗವಹಿಸಿದ್ದರು
ಅರಣ್ಯದಂಚಿನ ಪ್ರಾಣಿ ಹಾವಳಿ ಮತ್ತು ಒಕ್ಕಲೆಬ್ಬಿಸುವ ತಂತ್ರಗಾರಿಕೆ ವಿರೋಧಿಸಿ ಹುಣಸೂರು ನಗರದ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರ ಕಚೇರಿ ಎದುರು ಶುಕ್ರವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಹೊಸೂರು ಕುಮಾರ್‌ ಭಾಗವಹಿಸಿದ್ದರು   

ಹುಣಸೂರು: ಅರಣ್ಯ ಇಲಾಖೆಯಲ್ಲಿ ಬದಲಾಗುತ್ತಿರುವ ಕಾನೂನುಗಳು ರೈತ ಮತ್ತು ಅರಣ್ಯ ಇಲಾಖೆ ನಡುವಿನ ಸಂಘರ್ಷಕ್ಕೆ ಕಾರಣ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

ನಗರದ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರ ಕಚೇರಿ ಎದುರು ರೈತ ಸಂಘದಿಂದ ಕಾಡು ಪ್ರಾಣಿ ಹಾವಳಿ ತಪ್ಪಿಸಲು ಹಾಗೂ ವೈಜ್ಞಾನಿಕ ಪರಿಹಾರ ನೀಡುವಂತೆ ಒತ್ತಾಯಿಸಿ ನಡೆದ ಧರಣಿಯಲ್ಲಿ ಅವರು ಮಾತನಾಡಿದರು. ಅರಣ್ಯದಂಚಿನ ರೈತರು ನಿರಂತರವಾಗಿ ಒಂದಲ್ಲಾ ಒಂದು ರೀತಿ ವನ್ಯಪ್ರಾಣಿ ಹಾವಳಿಗೆ ಫಸಲು ಕಳೆದುಕೊಳ್ಳುತ್ತಿದ್ದು, ಇದಕ್ಕೆ ವೈಜ್ಞಾನಿಕ ದರ ನೀಡುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ಆಗಿಂದಾಗ್ಗೆ ಬದಲಾಗುತ್ತಿರುವ ಕಾನೂನು ರೈತರನ್ನು ದಿಕ್ಕು ತಪ್ಪಿಸುತ್ತಿವೆ ಎಂದರು.

ಆನೆ ದಾಳಿಗೆ ಬಲಿಯಾಗುವರಿಗೆ ಇಲಾಖೆ ₹ 15 ಲಕ್ಷ ನೀಡುತ್ತಿದ್ದು, ಇದನ್ನು ರೈತ ಸಂಘಟನೆ ವಿರೋಧಿಸಿ ₹50 ಲಕ್ಷ ನೀಡಬೇಕು ಎಂದು ಆಗ್ರಹಿಸಿದೆ. ದಶಕಗಳ ಹಿಂದೆ ಆನೆ ದಾಳಿಗೆ ಸಾವನ್ನಪ್ಪಿದವರಿಗೆ ಕನಿಷ್ಠ ಪರಿಹಾರ ನೀಡುತ್ತಿದ್ದ ಇಲಾಖೆ ರೈತ ಹೋರಾಟಕ್ಕೆ ಮಣಿದು ಗೌರವಯುತ ಪರಿಹಾರ ನೀಡಿದೆ ಎಂದರು.

ADVERTISEMENT

ವನ್ಯಪ್ರಾಣಿ ದಾಳಿಗೆ ಜೀವ ಕಳೆದುಕೊಳ್ಳುವ ಕುಟುಂಬದವರಿಗೆ ಪರಿಹಾರ ರೂಪದಲ್ಲಿ ಉದ್ಯೋಗ ನೀಡಬೇಕು. ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಅನೇಕ ಕುಟುಂಬಗಳು ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ಬೀದಿಪಾಲಾಗಿದೆ ಎಂದು ಕಿಡಿಕಾರಿದರು.

ಹುಲಿ, ಆನೆ ಸಂಘರ್ಷವನ್ನು ಇಲಾಖೆ ವೈಜ್ಞಾನಿಕವಾಗಿ ಪರಿಹರಿಸಬೇಕು. ಮಲೆ ಮಹದೇಶ್ವರ ಘಟನೆ ಬಳಿಕ ಜಾನುವಾರುಗಳನ್ನು ಅರಣ್ಯದಲ್ಲಿ ಮೇವಿಗೆ ಬಿಡದಂತೆ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಅರಣ್ಯದೊಂದಿಗೆ ಜಾನುವಾರುಗಳು ಪ್ರಾಕೃತಿಕ ಸಂಬಂಧ ಬೆಸೆದುಕೊಂಡಿದ್ದು, ಅಧಿಕಾರಿಗಳ ತಪ್ಪು ತೀರ್ಮಾನಗಳಿಂದ ಅರಣ್ಯವನ್ನು ರೈತರಿಂದ ಪ್ರತ್ಯೇಕಿಸುವ ಕೆಲಸ ನಡೆದಿದೆ ಎಂದರು.

ಅರಣ್ಯದಂಚಿನಲ್ಲಿ ವನ್ಯಪ್ರಾಣಿ ಹಾವಳಿ ನಿಯಂತ್ರಿಸಲು ಪ್ರಾಕೃತಿಕ ತಂತ್ರಜ್ಞಾನವಿದ್ದು ಅವುಗಳನ್ನು ಬಳಸಿಕೊಳ್ಳುವ ದಿಕ್ಕಿನಲ್ಲಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಶಾಸಕ ಮತ್ತು ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ಸರ್ಕಾರದಲ್ಲಿ ರೈತ ಮತ್ತು ಅರಣ್ಯ ಇಲಾಖೆಗಳ ನಡುವೆ ನಡೆದಿರುವ ವಿವಿಧ ಸಂಘರ್ಷಗಳು ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ಸರ್ಕಾರ ನೀಡಿದೆ. ಅರಣ್ಯದಂಚಿನ ಭೂಮಿ ಸಾಗುವಳಿ ಮಾಡುವ ರೈತರಿಗೆ ಇಲಾಖೆ ಸಮಸ್ಯೆ ಸೃಷ್ಟಿಸುತ್ತಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಅರಣ್ಯಕ್ಕೆ ಸೇರದ ಭೂಮಿಯನ್ನು ಕೈ ಬಿಟ್ಟು ರೈತ ಸ್ನೇಹಿಯಾಗಿ ವರ್ತಿಸಬೇಕು ಎಂದರು.

ವನ್ಯಪ್ರಾಣಿಗಳಿಂದ ಹಾನಿಗೊಂಡ ಬೆಳೆಗಳಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಚಿವರಿಗೆ ಪತ್ರ ಬರೆಯಲು ಸೂಚಿಸಿ, ಪಟ್ಟಿ ನೀಡುವಂತೆ ಸೂಚಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರು ತಮ್ಮ ನೋವನ್ನು ಹಂಚಿಕೊಂಡರು. ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣರಿಂದ 11 ಬೇಡಿಕೆಯನ್ನು ಒಳಗೊಂಡ ಮನವಿ ಪತ್ರ ಸ್ವೀಕರಿಸಿದ ಡಿಸಿಎಫ್‌ ಸೀಮಾ ಕೆಲವೊಂದು ಭವರವಸೆ ಪ್ರತಿಭಟನಾಕಾರರಿಗೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌, ಕಲ್ಕುಣಿಕೆ ಬಸವರಾಜ್‌, ಅತ್ತಿಕುಪ್ಪೆ ರಾಮಕೃಷ್ಣ, ವಿಷಕಂಠಪ್ಪ, ಮಹದೇವನಾಯಕ, ಉಡುವೆಪುರ ಚಂದ್ರೇಗೌಡ, ಮೋದೂರು ಶಿವಣ್ಣ, ಶ್ರೀಕಾಂತ್‌ ಸೇರಿದಂತೆ ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲ್ಲೂಕಿನಿಂದ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.