ADVERTISEMENT

ಅರಣ್ಯ ಭವನದಲ್ಲಿ ದಿಢೀರ್ ಪ್ರತಿಭಟನೆ: ಸಂಬಳ ನೀಡಲು ದಿನಗೂಲಿ ನೌಕರರ ಆಗ್ರಹ

ವೇತನ ಮಂಜೂರು ಮಾಡುವ ಭರವಸೆ ನೀಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 16:00 IST
Last Updated 27 ಆಗಸ್ಟ್ 2020, 16:00 IST
ಅರಣ್ಯ ಇಲಾಖೆಯ ದಿನಗೂಲಿ ನೌಕರರು ವೇತನ ಪಾವತಿಗೆ ಆಗ್ರಹಿಸಿ ಗುರುವಾರ ಅರಣ್ಯ ಭವನದಲ್ಲಿ ಪ್ರತಿಭಟನೆ ನಡೆಸಿದರು (ಎಡಚಿತ್ರ). ಲಾಕ್‌ಡೌನ್‌ ಅವಧಿಯ ವೇತನ ‍ಪಾವತಿಸಬೇಕು ಎಂದು ವಿವಿಧ ಇಲಾಖೆಗಳ ವಸತಿಶಾಲೆಗಳ ಹೊರಗುತ್ತಿಗೆ ನೌಕರರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು
ಅರಣ್ಯ ಇಲಾಖೆಯ ದಿನಗೂಲಿ ನೌಕರರು ವೇತನ ಪಾವತಿಗೆ ಆಗ್ರಹಿಸಿ ಗುರುವಾರ ಅರಣ್ಯ ಭವನದಲ್ಲಿ ಪ್ರತಿಭಟನೆ ನಡೆಸಿದರು (ಎಡಚಿತ್ರ). ಲಾಕ್‌ಡೌನ್‌ ಅವಧಿಯ ವೇತನ ‍ಪಾವತಿಸಬೇಕು ಎಂದು ವಿವಿಧ ಇಲಾಖೆಗಳ ವಸತಿಶಾಲೆಗಳ ಹೊರಗುತ್ತಿಗೆ ನೌಕರರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಕಳೆದ 7 ತಿಂಗಳುಗಳಿಂದ ವೇತನ ನೀಡದೇ ಸತಾಯಿಸುತ್ತಿರುವ ಕ್ರಮ ಖಂಡಿಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ನೇತೃತ್ವದಲ್ಲಿ ಗುರುವಾರ ಇಲ್ಲಿನ ಅರಣ್ಯ ಭವನದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

₹14 ಸಾವಿರ ವೇತನವನ್ನು ಸರ್ಕಾರವೇ ನಿಗದಿಪಡಿಸಿದೆ. ಆದರೆ, ಈಗ ಕೇವಲ ₹7 ಸಾವಿರದಿಂದ ₹8 ಸಾವಿರ ಮಾತ್ರವೇ ಕೊಡಲಾಗುತ್ತಿದೆ. ಈ ಸಂಬಳವನ್ನೂ ಕಳೆದ 7 ತಿಂಗಳುಗಳಿಂದ ಕೊಟ್ಟಿಲ್ಲ ಎಂದು ದೂರಿದರು.

‘ನಕಲಿ ಹೆಸರಿನಲ್ಲಿ ಅನೇಕ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಅಧಿಕಾರಿಗಳು 10 ಮಂದಿ ಕೆಲಸ ಮಾಡಿದರೆ 50 ಮಂದಿ ಇದ್ದಾರೆ ಎಂದು ತಾವೇ ಸಹಿ ಮಾಡಿಕೊಂಡು ಹಣವನ್ನು ತಮ್ಮ ಕಿಸೆಗಿಳಿಸುತ್ತಿದ್ದಾರೆ. ಶ್ರೀರಂಗಪ‍ಟ್ಟಣ ತಾಲ್ಲೂಕಿನಲ್ಲಿ ಭಾರಿ ಅವ್ಯವಹಾರ ನಡೆದಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ದಿನಗೂಲಿ ನೌಕರರೊಬ್ಬರು ತಿಳಿಸಿದರು.

ADVERTISEMENT

ಕೆಲವರಿಗೆ 7 ತಿಂಗಳುಗಳಿಂದ ಸಂಬಳ ಬಂದಿಲ್ಲ. ಮತ್ತೆ ಹಲವರಿಗೆ 6– 5 ತಿಂಗಳಿಂದ ಬಂದಿಲ್ಲ. ಹೀಗಾದರೆ, ಕುಟುಂಬವನ್ನು ನಿರ್ವಹಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಸಮರ್ಪಕವಾಗಿ ಸಂಬಳ ಕೇಳಿದರೆ ಕೆಲಸಕ್ಕೆ ಬರಬೇಡಿ ಎನ್ನುತ್ತಾರೆ. ಸಮವಸ್ತ್ರವನ್ನೂ ಕೊಟ್ಟಿಲ್ಲ ಎಂದು ಅವರು ಕಿಡಿಕಾರಿದರು.

ಸಂಘದ ಅಧ್ಯಕ್ಷ ಎ.ಎಂ.ನಾಗರಾಜು, ಪ್ರಧಾನ ಕಾರ್ಯದರ್ಶಿ ಎ.ಎಸ್. ನಂಜುಂಡಸ್ವಾಮಿ, ಸಂಘಟನಾ ಕಾರ್ಯದರ್ಶಿ ರುದ್ರಯ್ಯ, ಮುಖಂಡರಾದ ಸುಕನ್ಯಾ, ತುಳಸಿಕುಮಾರ, ನಿಂಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.