ADVERTISEMENT

ದಲಿತರನ್ನು ವಿವಾಹವಾಗುವವರಿಗೆ ಸರ್ಕಾರಿ ಉದ್ಯೋಗ

ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಪರಿಶಿಷ್ಟ ಜಾತಿ, ಪ.ಪಂಗಡಗಳ ಕಲ್ಯಾಣ ಸಮಿತಿ ನಿರ್ಧಾರ; ಮೈಸೂರು ಜಿಲ್ಲೆಯಲ್ಲಿ 797 ಅಂತರ್ಜಾತಿ ವಿವಾಹ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 14:42 IST
Last Updated 14 ಜೂನ್ 2019, 14:42 IST
   

ಮೈಸೂರು: ದಲಿತ ಯುವಕ ಅಥವಾ ಯುವತಿಯನ್ನು ಸವರ್ಣೀಯರು ವಿವಾಹವಾದರೆ, ಆ ಜೋಡಿಯಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ವಿಧಾನ ಮಂಡಲದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಶುಕ್ರವಾರ ನಿರ್ಣಯ ಕೈಗೊಂಡಿತು.

ಜಿಲ್ಲಾ ವ್ಯಾಪ್ತಿಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿಂದಿಯಾ ಸಭೆಗೆ ಮಾಹಿತಿ ನೀಡಿ, ‘ಮೈಸೂರು ಜಿಲ್ಲೆಯಲ್ಲಿ 2016–17, 2017–18 ಹಾಗೂ 2018–19ರಲ್ಲಿ ಈ ರೀತಿ ಒಟ್ಟು 797 ವಿವಾಹಗಳಾಗಿವೆ. ಈ ಜೋಡಿಗಳಿಗೆ ಇಲಾಖೆಯ ವತಿಯಿಂದ ಪ್ರೋತ್ಸಾಹಧನ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ‘ಈ ಸಂಖ್ಯೆ ಅತ್ಯುತ್ತಮವಾಗಿದೆ. ಇದು ರಾಜ್ಯದಲ್ಲೇ ಅಧಿಕ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಬೇಕು. ಈ ರೀತಿಯ ವಿವಾಹವಾದರೆ, ಜೋಡಿಯಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.

ಜಿಲ್ಲೆಯಲ್ಲಿ ಸರ್ಕಾರೇತರ ಸಂಸ್ಥೆಗಳು ಸಾಮೂಹಿಕ ವಿವಾಹ ನಡೆಸುತ್ತಿದ್ದು, ಪ್ರೋತ್ಸಾಹಧನವಾಗಿ ಈ ಸಂಸ್ಥೆಗಳಿಗೆ ₹ 100 ಹಾಗೂ ಜೋಡಿಗೆ ₹ 10 ಸಾವಿರ ನೀಡುತ್ತಿರುವುದಾಗಿ ಬಿಂದಿಯಾ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸರ್ಕಾರೇತರ ಸಂಸ್ಥೆಗಳಿಗೆ ನೀಡುವ ಪ್ರೋತ್ಸಾಹಧನವನ್ನು ₹ 1 ಸಾವಿರಕ್ಕೆ ಹಾಗೂ ಜೋಡಿಗೆ ₹ 25 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.