
ಮೈಸೂರು: ‘ದಲಿತರು ಮುಖ್ಯಮಂತ್ರಿ ಕುರ್ಚಿಗಾಗಿ ಬೇಡುವ ಬದಲಿಗೆ ಸಿದ್ದರಾಮಯ್ಯ ಅವರಂತೆ ಹಕ್ಕು ಮಂಡಿಸಬೇಕು’ ಎಂದು ಲೇಖಕ ಸಿ.ಹರಕುಮಾರ್ ಹೇಳಿದರು.
ದಲಿತ ಸಂಘರ್ಷ ಸಮಿತಿಯು ಸಂಸ್ಥಾಪಕ ರಾಜ್ಯ ಸಂಚಾಲಕ ದಿ.ಲಕ್ಷ್ಮೀನಾರಾಯಣ ನಾಗವಾರ ಅವರ ಪ್ರಥಮ ವರ್ಷದ ಸ್ಮರಣೆ ಅಂಗವಾಗಿ ಇಲ್ಲಿನ ರೋಟರಿ ಸಭಾಂಗಣದಲ್ಲಿ ಶನಿವಾರ ನಡೆದ ‘ಗುರಿಮುಟ್ಟದ ದಲಿತ ರಾಜಕಾರಣ ಮತ್ತು ಮುಂದಿನ ನಡೆ’ ಕುರಿತ ವಿಚಾರಸಂಕಿರಣದಲ್ಲಿ ‘ಅಹಿಂದ ರಾಜಕಾರಣದಲ್ಲಿ ದಲಿತ ರಾಜಕೀಯದ ಅಸ್ತಿತ್ವ ಮತ್ತು ಪರಿಣಾಮಗಳು’ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.
‘ಸಿದ್ದರಾಮಯ್ಯ ಅವರು ಅಧಿಕಾರಕ್ಕಾಗಿ ಬೇಡಿಕೆ ಮಂಡಿಸುತ್ತಾರೆ. ಜೊತೆಗೆ ಮೌಢ್ಯ ವಿರೋಧಿ ನಡೆಯಿಂದ, ಬಿಜೆಪಿ ಹಾಗೂ ಆರ್‌ಎಸ್ಎಸ್ ಕಡು ವಿರೋಧಿಯಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲಾ ಜಾತಿಯವರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಚಾಣಾಕ್ಷ ನಡೆ ಅನುಸರಿಸುತ್ತಾರೆ. ಇದರಿಂದಾಗಿಯೇ ಅವರಿಗೆ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ’ ಎಂದರು.
ಹಕ್ಕು ಮಂಡಿಸುತ್ತಿಲ್ಲ:
‘ಸತೀಶ ಜಾರಕಿಹೊಳಿ ಅವರು 2028ಕ್ಕೆ ಮುಖ್ಯಮಂತ್ರಿ ಹುದ್ದೆ ಕೇಳುವುದಾಗಿ ಹೇಳಿದ್ದಾರೆ. ಆದರೆ, ಪರಿಶಿಷ್ಟ ಜಾತಿಯ ಮುಖಂಡರು ಆ ರೀತಿ ಹಕ್ಕು ಮಂಡಿಸುತ್ತಿಲ್ಲ. ಇದರಿಂದಾಗಿಯೇ ಸಮಾಜಕ್ಕೆ ಹಿನ್ನಡೆ ಆಗುತ್ತಿದೆ’ ಎಂದು ಹೇಳಿದರು.
‘ಪರಿಶಿಷ್ಟರಿಗೆ ಮೀಸಲಾದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದರೂ ಯಾರೊಬ್ಬರೂ ಕೇಳಲಿಲ್ಲ. ಒಳ ಮೀಸಲಾತಿ ನಿಜವಾಗಿಯೂ ಅಸ್ಪೃಶ್ಯರಾದ ಎಡ-ಬಲ- ಪೌರಕಾರ್ಮಿಕರಿಗೆ ಸಿಗಬೇಕು. ಆದರೆ, ಸರ್ಕಾರದ ಗೊಂದಲದಿಂದಾಗಿ ನ್ಯಾಯಾಲಯಕ್ಕೆ ಹೋಗಿದೆ. ಇದರಿಂದ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಯುವಕರಿಗೆ ಉದ್ಯೋಗ ಕೂಡ ಸಿಗುತ್ತಿಲ್ಲ. ಹೀಗಾಗಿ ಅವರಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ಹರಿಹರ ಆನಂದಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಡಿ. ಸಣ್ಣಸ್ವಾಮಿ ಸರಗೂರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ದಸಂಸ ವಿಭಾಗೀಯ ಸಂಚಾಲಕ ರಾಜಶೇಖರ ಕೋಟೆ ಮಾತನಾಡಿ, ‘ದಲಿತರಿಗೆ ಆಗುತ್ತಿರುವ ಅನ್ಯಾಯ ತಡೆಯಲು, ಅಸ್ಪೃಶ್ಯತೆ ನಿವಾರಣೆಗೆ ಹೋರಾಡಲು ದಸಂಸ ಹುಟ್ಟಿಕೊಂಡಿತು. ಈ ಸಂಘಟನೆಗೆ 50 ವರ್ಷ ತುಂಬಿದೆ. ಆದರೂ ದಲಿತರಿಗೆ ಅನ್ಯಾಯ ಮುಂದುವರಿದಿದೆ. ಅಂಬೇಡ್ಕರ್ ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಎಲ್ಲರೂ ಒಗ್ಗೂಡಿ ಚಳವಳಿ ಮುಂದುವರಿಸಬೇಕಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ದಸಂಸ ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ‘ಅಹಿಂದ ವರ್ಗ ನನಗಾಗಿಯೋ ಅಥವಾ ಎಲ್ಲರಿಗಾಗಿಯೋ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಿತುಕೊಳ್ಳಬೇಕು. ಕಾಂಗ್ರೆಸ್‌ಗೆ ದಲಿತರೇ ಮತ ಬ್ಯಾಂಕ್. ಹೀಗಾಗಿ, ಅವರಿಗೆ ಅಧಿಕಾರ ಕೊಡಬೇಕೆಂದು ಆ ಪಕ್ಷದ ಹೈಕಮಾಂಡ್ ಮನಗಾಣಬೇಕು’ ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ರಾಜ್ಯ ಕಾರ್ಯಕಾರಿ ಸಮಿತಿ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ಜಿಲ್ಲಾ ಸಂಚಾಲಕ ಭುಗತಗಳ್ಳಿ ಕೆ. ಮಣಿಯಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.