ಮೈಸೂರು: ನವರಾತ್ರಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಬೊಂಬೆ ಪ್ರದರ್ಶನಕ್ಕೆ ಜನರು ಹೊಸ ಬೊಂಬೆಗಳನ್ನು ಖರೀದಿಸುವುದು ವಾಡಿಕೆ. ನಜರ್‌ಬಾದ್‌ನ ‘ರಾಮ್‌ಸನ್ಸ್ ಪ್ರತಿಷ್ಠಾನ’ದಲ್ಲಿ 10 ಸಾವಿರ ತರಹೇವಾರಿ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಗುರುವಾರ 21ನೇ ಆವೃತ್ತಿಯ ‘ಬೊಂಬೆ ಪ್ರದರ್ಶನ’ಕ್ಕೆ ಚಾಲನೆ ಸಿಕ್ಕಿತು.
ಸುರಪುರದ ರಾಜವಂಶಸ್ಥ ರಾಜಾ ಕೃಷ್ಣಪ್ಪ ನಾಯಕ ಪ್ರದರ್ಶನ ಉದ್ಘಾಟಿಸಿದರೆ, ವಿಶೇಷ ಅಂಕಣಗಳನ್ನು ಡೆಕ್ಕನ್ ಹೆರಿಟೇಜ್ ಸಂಸ್ಥೆಯ ಸದಸ್ಯರಾದ ಹೆಲನ್ ಫಿಲೋಮ್, ಸ್ಟೆಫಾನ್ ಬ್ಲೊಕ್ ಸಲೋಜ್ ಅನಾವರಣಗೊಳಿಸಿದರು.
ಇಲ್ಲಿ, ಬೊಂಬೆಗಳಲ್ಲದೆ, ವಿವಿಧ ಶೈಲಿಯ ಪಾರಂಪರಿಕ ಚಿತ್ರಫಲಕಗಳಿರುವುದು ವಿಶೇಷ. ರಾಮಾಯಣ– ಮಹಾಭಾರತದ ದೃಶ್ಯ ಕಾವ್ಯದ ಲೋಕವನ್ನೇ ಸೃಷ್ಟಿಸಲಾಗಿದೆ. ದಸರಾ ಪರಂಪರೆಯನ್ನು ಬಿಂಬಿಸುವ ಜಂಬೂ ಸವಾರಿ, ಬೆಟ್ಟದ ಚಾಮುಂಡೇಶ್ವರಿ ಉತ್ಸವ ಮೂರ್ತಿ, ಮೈಸೂರಿನ ಪಾರಂಪರಿಕ ಕಟ್ಟಡಗಳು, ಯೋಗಾಸನ ಮಾಡುತ್ತಿರುವ ಗಣೇಶ, ಕೇರಳದ ಚಂಡೆ ಮೇಳ, ದಸರಾ ದರ್ಬಾರ್ ಸೇರಿವೆ.
ಮಣ್ಣು, ಮರ, ಟೆರ‍್ರಾಕೋಟ, ಸೆರಮಿಕ್, ಪ್ಲಾಸ್ಟರ್ ಆಫ್ ಪ್ಯಾರೀಸ್, ಲೋಹ ಹಾಗೂ ಬಟ್ಟೆಯಿಂದ ಮಾಡಿದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯದ ಪಾರಂಪರಿಕ ಗೊಂಬೆಗಳಿವೆ.
ಏನೇನಿವೆ:
ಹನುಮಂತನ ಬಾಲಲೀಲೆಗಳನ್ನು ಕಥೆಗಳ ಬೊಂಬೆ ಲೋಕವಿದೆ. ರಾಮನ ಭೇಟಿ, ಸುಗ್ರೀವ ಸಖ್ಯ, ಸೀತಾ ಅನ್ವೇಷಣ, ಲಂಕಾ ದಹನ, ಸಮುದ್ರ ಲಂಘನ, ಸೇತು ಬಂಧನ, ರಾವಣ ಸಂಹಾರ, ರಾಮ ಪಟ್ಟಾಭಿಷೇಕದ ದೃಶ್ಯವಿರುವ ‘ಹನುಮದ್ ವಿಲಾಸ’ ಇದೆ. ದಶಾವತಾರ, ನವ ದುರ್ಗೆಯರು, ಶಿವ–ಪಾರ್ವತಿ ಕಲ್ಯಾಣ, ಪಾಂಡುರಂಗ ವಿಠ್ಠಲ, ಕೃಷ್ಣಲೀಲೆ, ಕಲ್ಪವೃಕ್ಷ, ಸಾಗರ ಮಂಥನ, ಪಟ್ಟದ ಗೊಂಬೆಗಳು ಸೇರಿದಂತೆ ಹಲವು ಕಥನಗಳು ಅಡಕವಾಗಿವೆ.
ತೊಗಲುಗೊಂಬೆ ಕಲಾವಿದರು ಆಟವನ್ನು ಪ್ರದರ್ಶಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ. ಸಿಂಗ್, ಕಲಾವಿದ ರಘು ಧರ್ಮೇಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.