ಸರಗೂರು: ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜು, ಲಯನ್ಸ್ ಸ್ಕೂಲ್ ಆವರಣದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಗುಂಡು ಎಸೆದು ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಲ್ಲಿ ಓದುವ, ಕ್ರೀಡೆಯಲ್ಲಿನ ಆಸಕ್ತಿ ಕಡಿಮೆಯಾಗುತ್ತಿದ್ದು, ಇದನ್ನು ವೃದ್ಧಿಸಲು ಕ್ರೀಡೆ ಪ್ರಯೋಜನಕಾರಿಯಾಗಿದೆ. ಎಲ್ಲರೂ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಹೇಳಿದರು.
ದಸರಾ ಕ್ರೀಡಾಕೂಟದ ತಾಲ್ಲೂಕು ಮಟ್ಟದ ಸಂಚಾಲಕ ಎಂ.ವಿಶ್ವ ಮಾತನಾಡಿ, ದಸರಾ ಗ್ರಾಮೀಣ ಕ್ರೀಡಾಕೂಟ ದಿಂದ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿದೆ. ಅಲ್ಲದೆ ಅವರನ್ನು ಜಿಲ್ಲಾ ಮಟ್ಟದಲ್ಲಿಯೂ ಗುರುತಿಸಬಹುದು. ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ನೂರಾಳಸ್ವಾಮಿ, ಚಲುವಕೃಷ್ಣ, ವಿನಾಯಕ್ ಪ್ರಸಾದ್, ಮುಖಂಡರಾದ ರಾಮು, ಚೈತ್ರಾ, ನಾಗರಾಜು, ಕ್ರೀಡಾಕೂಟದ ಸಂಚಾಲಕ ಎಂ.ವಿಶ್ವ, ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಪ್ಪ, ಪ್ರಾಂಶುಪಾಲ ದಯಾನಂದ, ಪ್ರಗತಿ ವೇಣು, ಲಯನ್ಸ್ ವಿಜಯ್, ಡಿ.ಸಿ.ದಾಸಾಚಾರಿ, ವಾಲಿಬಾಲ್ ರಾಮು, ಕ್ರೀಡಾಕೂಟ ನಡೆಸಿಕೊಟ್ಟರು. ಸರಗೂರು ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ವಿವಿಧ ಭಾಗಗಳಿಂದ ಕ್ರೀಡೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ವಾಲಿಬಾಲ್, ಥ್ರೋಬಾಲ್, ಕೊಕ್ಕೊ ಕಬಡ್ಡಿ, ಅಥ್ಲೆಟಿಕ್ಸ್, ಯೋಗ ಸ್ಪರ್ಧೆಗಳು ನಡೆದವು. ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರೋಗ ದಿಂದ ಮುಕ್ತರಾಗಲು ಕ್ರೀಡೆ ಸಹಕಾರಿಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.