
ತಿ.ನರಸೀಪುರ: ಈ ಬಾರಿಯ ಕನಕ ಜಯಂತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಉದ್ದೇಶವಿದ್ದು, ಅವರ ದಿನಾಂಕ ಪಡೆದ ಬಳಿಕ ಸಾಂಪ್ರಾದಾಯಿಕ ಅಥವಾ ಅದ್ದೂರಿ ಆಚರಣೆಗೆ ನಿರ್ಧರಿಸಲಾಯಿತು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಡೆದ ಚರ್ಚೆಯ ವೇಳೆ ಈ ನಿರ್ಣಯ ಕೈಗೊಳ್ಳಲಾಗಿದೆ.
ಮುಖಂಡ ಎಂ.ರಮೇಶ್ ಮಾತನಾಡಿ, ‘ಪಟ್ಟಣದಲ್ಲಿ ನ.8ರಂದು ಮುಖ್ಯಮಂತ್ರಿಗಳನ್ನು ಸಿಎಂ ಅವರನ್ನು ಆಹ್ವಾನಿಸಿ ಕನಕದಾಸರ ಜಯಂತಿ ಆಚರಿಸುವುದು ಸೂಕ್ತ. ಹಾಗಾದಲ್ಲಿ ತಾಲ್ಲೂಕು ಆಡಳಿತ ಮತ್ತು ಕುರುಬರ ಸಂಘದ ಸ್ಪಷ್ಟ ನಿರ್ಣಯ ಪ್ರಕಟಿಸಬೇಕು ಹಾಗೂ ತಾಲ್ಲೂಕಿನವರಾದ ಹಿರಿಯ ಹೃದ್ರೋಗ ತಜ್ಞ ಬಿ.ದಿನೇಶ್ ಅವರು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದು, ಅವರಿಗೂ ಸನ್ಮಾನಿಸಬೇಕಿದೆ. ಕನಕದಾಸರ ಜಯಂತಿಯಂದು ಅವರನ್ನು ಸನ್ಮಾನಿಸಿ ಗೌರವಿಸುವ ಕೆಲಸ ಮಾಡುವಂತೆ ಅವರು ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎಸ್.ಮಹದೇವಸ್ವಾಮಿ(ಮಹೇಶ್) ಮಾತನಾಡಿ, ‘ಕುರುಬರ ಸಂಘದ ಈಗಿನ ಆಡಳಿತ ಮಂಡಳಿ ಅವಧಿ ಪೂರ್ಣಗೊಳ್ಳುವುದರಿಂದ ಸಿಎಂ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಿ ಅದ್ಧೂರಿಯಾಗಿ ನಡೆಸಲು ಸಭೆಯಲ್ಲಿ ನಿರ್ಧರಿಸಿದ್ದೇವೆ. ಅವರು ಭಾಗವಹಿಸುವ ದಿನದ ಬಗ್ಗೆ ಡಾ.ಯತೀಂದ್ರ ಅವರು ತಿಳಿಸಲಿದ್ದು, ಬಳಿಕವಷ್ಟೇ ಜಯಂತಿ ಆಚರಣೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ’ ಎಂದು ತಿಳಿಸಿದರು.
ತಹಶೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, ‘ಕನಕದಾಸರ ಜಯಂತಿಗೆ ಸಿದ್ದರಾಮಯ್ಯ ಅವರು ಬರುವುದಾದರೆ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿ, ತಾಲೂಕು ಆಡಳಿತಕ್ಕೆ ಸೂಚಿಸುತ್ತಾರೆ. ಹಾಗಾಗಿ ಈಗ ನಾವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ. ಮಾಹಿತಿ ನೀಡಿದ ಬಳಿಕವಷ್ಟೇ ಕನಕದಾಸರ ಜಯಂತಿ ಆಚರಣೆಗೆ ನಿರ್ಧರಿಸಲು ಸಾಧ್ಯ’ ಎಂದು ತಿಳಿಸಿದರು.
ಯೋಜನಾಧಿಕಾರಿ ರಂಗಸ್ವಾಮಿ, ತಾಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ಬಿ.ಮರಯ್ಯ, ರಾಮಲಿಂಗಯ್ಯ, ಆಲಗೂಡು ಎಸ್. ಚಂದ್ರಶೇಖರ್, ಕುರುಬರ ಸಂಘದ ನಿರ್ದೇಶಕ ಎಚ್.ಸಿ.ಅರುಣ್ ಕುಮಾರ, ಬಿ.ಮನ್ಸೂರ್ ಆಲಿ, ಅಕ್ಬರ್ ಪಾಷ, ಮುಖಂಡರಾದ ಎ ಶಿವಕುಮಾರ್(ಬಡ್ದು), ಶ್ರೀಕಂಠ, ಮೂಗೂರು ಹರೀಶ, ಕೆಂಪಯ್ಯನಹುಂಡಿ ರಾಜು, ಮನೋಜ್ ಕುಮಾರ್, ಕನ್ನಾಯಕನಹಳ್ಳಿ, ಮರಿಸ್ವಾಮಿ, ಕೋಣಗಹಳ್ಳಿ ನಾಗರಾಜು, ಆರೋಗ್ಯ ಅಧಿಕಾರಿ ಡಾ.ರವಿಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ರಾಜಣ್ಣ, ಪರಿಶಿಷ್ಟ ವರ್ಗಗಳ ಅಧಿಕಾರಿ ಕೋಮಲ, ಸೆಸ್ಕ್ ಎಇಇ ಕೆ.ವಿ.ವೀರೇಶ್ ಹಾಗೂ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.