ADVERTISEMENT

ಗುಲಾಮಗಿರಿಗೆ ದೂಡಲು ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ಘೋಷಣೆ: ಪುಷ್ಪಾ ಅಮರನಾಥ್‌

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 9:57 IST
Last Updated 25 ಆಗಸ್ಟ್ 2021, 9:57 IST
ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಭಾರತವನ್ನು ಮಾರುವುದನ್ನು ನಿಲ್ಲಿಸಿ’ ಎಂಬ ಪೋಸ್ಟರ್‌ಗಳನ್ನು ಪ್ರತಿಭಟನಾತ್ಮಕವಾಗಿ ಪ್ರದರ್ಶಿಸಿದ ಕೆಪಿಸಿಸಿ ಮಹಿಳಾ ಘಟಕದ ಪದಾಧಿಕಾರಿಗಳು
ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಭಾರತವನ್ನು ಮಾರುವುದನ್ನು ನಿಲ್ಲಿಸಿ’ ಎಂಬ ಪೋಸ್ಟರ್‌ಗಳನ್ನು ಪ್ರತಿಭಟನಾತ್ಮಕವಾಗಿ ಪ್ರದರ್ಶಿಸಿದ ಕೆಪಿಸಿಸಿ ಮಹಿಳಾ ಘಟಕದ ಪದಾಧಿಕಾರಿಗಳು   

ಮೈಸೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ (ಎನ್‌ಎಂಪಿ) ಮೂಲಕ ದೇಶವನ್ನು ಸಂಘಟನಾತ್ಮಕ ಹಾಗೂ ಕಾನೂನುಬದ್ಧವಾಗಿ ಲೂಟಿ ಹೊಡೆಯಲು ಮುಂದಾಗಿದೆ. ಆಸ್ತಿಯನ್ನು 3–4 ಉದ್ಯಮಿಗಳಿಗೆ ಅಡವಿಟ್ಟು, ಜನರನ್ನು ಗುಲಾಮಗಿರಿ ವ್ಯವಸ್ಥೆಗೆ ದೂಡಲು ಮುಂದಾಗಿದೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಒದಗಿಸಲು ಕೇಂದ್ರ ಸರ್ಕಾರ ₹6 ಲಕ್ಷ ಕೋಟಿ ಮೊತ್ತದ ಎನ್‌ಎಂಪಿಯನ್ನು ಘೋಷಿಸಿದೆ. ರೈಲು ನಿಲ್ದಾಣಗಳು, ರಸ್ತೆಗಳು, ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಕೊಳವೆಮಾರ್ಗ, ವಿದ್ಯುತ್ ವಲಯದ ಯೋಜನೆಗಳನ್ನು ಖಾಸಗಿ ವಲಯದ ಕಂಪನಿಗಳಿಗೆ ಲೀಸ್ ಆಧಾರದಲ್ಲಿ ವರ್ಗಾಯಿಸಲು ಮುಂದಾಗಿದೆ. ದೇಶವನ್ನು ಮಾರಾಟ ಮಾಡಲು ನಾನು ಬಿಡುವುದಿಲ್ಲ ಎಂದು ಹೇಳಿದ್ದ ಮೋದಿ, ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಕಳೆದ 70 ವರ್ಷಗಳಿಂದ ಸೃಷ್ಟಿಸಿದ್ದ ಸಂಪತ್ತನ್ನು, 7 ವರ್ಷಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದೇನಾ ಆತ್ಮ ನಿರ್ಭರ್‌’ ಎಂದು ಪ್ರಶ್ನಿಸಿದ್ದರು.

‘ಈ ಯೋಜನೆಯನ್ನು ಘೋಷಿಸುವ ಮುನ್ನ ಜನರ ಅಭಿಪ್ರಾಯ ಪಡೆದಿಲ್ಲ. ಈ ಬಗ್ಗೆ ಚರ್ಚೆಯೂ ನಡೆಸಿಲ್ಲ. ದೇಶದ ಆರ್ಥಿಕ ನೀತಿಯನ್ನು ಉಲ್ಲಂಘಿಸಿ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಇದನ್ನು ಘೋಷಿಸಲಾಗಿದೆ. ಬ್ರಿಟಿಷರ ವಸಾಹತುಶಾಹಿ ಆಡಳಿತದಂತೆ, ದೇಶದಲ್ಲಿ ಅಂಬಾನಿ– ಅದಾನಿ ಅಂತಹವರು ಆಡಳಿತ ನಡೆಸಲು ಅಧಿಕೃತ ಪಾಸ್‌ಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿದೆ. ಜನಸಾಮಾನ್ಯರನ್ನು ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ಇದರಿಂದ ಜನರು ಎಚ್ಚೆತ್ತುಕೊಳ್ಳಬೇಕು. ಇದರ ವಿರುದ್ಧ ಜನಾಂದೋಲನ ನಡೆಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದಂತೆ. ಇದರಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳಾದ ಲತಾ ಸಿದ್ದಶೆಟ್ಟಿ, ಪುಷ್ಪವಲ್ಲಿ, ಸುಶೀಲಾ ನಂಜಪ್ಪ, ಲತಾ ಮೋಹನ್‌, ಸುನಂದಾ, ರಾಧಾಮಣಿ ಇದ್ದರು.

***

ಎನ್‌ಎಂಪಿ ವಿರುದ್ಧ ‘ಭಾರತವನ್ನು ಮಾರುವುದನ್ನು ನಿಲ್ಲಿಸಿ’ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಕೈಗೊಳ್ಳಲಾಗಿದೆ.

–ಪುಷ್ಪಾ ಅಮರನಾಥ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.