ADVERTISEMENT

PV Web Exclusive | ವೆಲ್‌ಡನ್‌ ಅರ್ಜುನ, ಗುಡ್‌ಬೈ!

ಕೆ.ಓಂಕಾರ ಮೂರ್ತಿ
Published 14 ಸೆಪ್ಟೆಂಬರ್ 2020, 8:15 IST
Last Updated 14 ಸೆಪ್ಟೆಂಬರ್ 2020, 8:15 IST
ಮೈಸೂರು ಮುಂಭಾಗ ಅರ್ಜುನ
ಮೈಸೂರು ಮುಂಭಾಗ ಅರ್ಜುನ   

ಮೈಸೂರು: ಅರ್ಜುನ ಬರುತ್ತಿಲ್ಲವಂತೆ! ಅವನಿಗೆ ವಯಸ್ಸಾಯಿತಂತೆ! ಅವನಿಗೆ ಒಳ್ಳೆಯದಾಗಲಿ, ವೆಲ್‌ಡನ್‌ ಅರ್ಜುನ, ಗುಡ್‌ಬೈ!

ಮೈಸೂರು ನಗರದ ಜನರಲ್ಲಿ ಈಗೊಂಥರ ಬೇಸರ, ಯಾತನೆ. ಬರೀ ಮೈಸೂರು ಏಕೆ? ರಾಜ್ಯದ ಹಲವು ಮಂದಿಗೆ ಸ್ಮರಣೀಯ ನೆನಪುಗಳನ್ನು ಕಟ್ಟಿಕೊಟ್ಟಿರುವ ಅರ್ಜುನ ಆನೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಈ ಆನೆಗೆ 60 ವರ್ಷ ತುಂಬಿರುವುದರಿಂದಗಜಪಡೆ ಪಟ್ಟಿಯಲ್ಲಿ ಈ ಸಲ ಸ್ಥಾನ ಸಿಕ್ಕಿಲ್ಲ.ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ, ಅರಣ್ಯ ಇಲಾಖೆಯು ಅರ್ಜುನನ ಬದಲಿಗೆ ಅಭಿಮನ್ಯು ಆನೆ ಆಯ್ಕೆ ಮಾಡಿದೆ.

ADVERTISEMENT

ನಿಜ, ಎಲ್ಲಾ ಒಳ್ಳೆಯ ಸಂಗತಿಗಳಿಗೆ ಅಂತ್ಯ ಎಂಬುದು ಇರುತ್ತದೆ. ಅದೀಗ ಅರ್ಜುನನ ಸರದಿ. ನಿವೃತ್ತನಾಗಿರುವ ಅರ್ಜುನನು ದಸರೆಯಲ್ಲಿ ಮೂಡಿಸಿರುವ ಹೆಜ್ಜೆ ಗುರುತುಗಳು ಸದಾ ಶಾಶ್ವತ.

ದಸರಾ ಮಹೋತ್ಸವ ಜಗದಗಲ ಖ್ಯಾತಿ ‍ಪಡೆಯಲು ಪ್ರಮುಖ ಕಾರಣ ಜಂಬೂಸವಾರಿ. 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾ‍ನೆಯಾಗುವ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ಆನೆಯು ಅರಮನೆ ಮುಂಭಾಗದಿಂದ ಬನ್ನಿಮಂಟಪಕ್ಕೆ ಸಾಗುವುದನ್ನು ನೋಡಲು ಲಕ್ಷಾಂತರ ಜನ ಸೇರುತ್ತಾರೆ. ಸಂಭ್ರಮದ ಜೊತೆಗೆ ಭಕುತಿ ಭಾವ ನೆಲೆಸುತ್ತದೆ. ಇಂಥ ಮಹಾನ್‌ ಕಾರ್ಯವನ್ನು ಅರ್ಜುನ ಆನೆಯು ಯಶಸ್ವಿಯಾಗಿ ನಿಭಾಯಿಸಿದೆ.

ಆರಂಭದಲ್ಲಿ ದೊಡ್ಡಮಾಸ್ತಿ, ಬಳಿಕ ಅವರ ಪುತ್ರ ಮಹೇಶ್‌, ಆನಂತರವಿನೂ ಈ ಆನೆಯನ್ನು ವಿಜಯದಶಮಿ ಮೆರವಣಿಗೆಯಲ್ಲಿ ಮುನ್ನಡೆಸಿದ್ದರು.

‘ಅರ್ಜುನ ಆನೆಯನ್ನು ಮೊದಲ ಬಾರಿ ಮುನ್ನಡೆಸಲು ಅವಕಾಶ ದೊರೆತಾಗ ಹೆಚ್ಚಿನವರು ಹೆದರಿಸಿದ್ದರು. ಅಪಾಯಕಾರಿ, ತೊಂದರೆಯಾಗುಬಹುದು ಎನ್ನುತ್ತಾ ಆತ್ಮಸ್ಥೈರ್ಯ ಕುಗ್ಗಿಸಿದ್ದರು. ಅದರ ಭಾವನೆ ಅರಿತಿದ್ದ ನಾನು ಯಾವುದೇ ಬೆದರಿಕೆಗೆ ಜಗ್ಗಲಿಲ್ಲ‌. ಕಣ್ಣಿನಲ್ಲೇ ಅದರ ಪ್ರೀತಿ ಸಂಪಾದಿಸಿದೆ’ ಎಂದು ಹೇಳುತ್ತಾರೆ ಮಾವುತ ವಿನೂ.

ವಿನೂ ಮೇಲೆ ಅರ್ಜುನನಿಗೆ ವಿಶೇಷ ಪ್ರೀತಿ. ಎಲ್ಲಕ್ಕಿಂತ ಮುಖ್ಯವಾಗಿ ಇಬ್ಬರ ನಡುವೆ ಗಾಢ ಆಪ್ತತೆ ಬೆಳೆದಿದೆ. ಟೆಂಟ್‌ನಲ್ಲಿ ವಿನೂ ನಿದ್ದೆಯಲ್ಲಿದ್ದಾಗ ಯಾರಾದರೂ ಎಬ್ಬಿಸಲು ಬಂದರೆ ಸೊಂಡಿಲಿನಲ್ಲಿ ಸೊಪ್ಪು ಹಿಡಿದು ಬೀಸುತ್ತದೆ.ಮಾವುತನ ಹೆಂಡತಿ, ಮಕ್ಕಳು ಬಂದರೂ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಈ ಆನೆ ಬಳಿ ಮಲಗುವುದೆಂದರೆ ಅಮ್ಮನ ತೋಳಿನಲ್ಲಿ ಮಗು ನಿದ್ರಿಸಿದಂತೆ! ವಿನೂ ಪಾಲಿಗೆ ಅಷ್ಟೊಂದು ಸುರಕ್ಷಿತ.

‘ಸ್ವಲ್ಪ ಹೊತ್ತು ಹೊರಗೆ ಹೋದರೂ ಅರ್ಜುನ ಸಿಟ್ಟು ಮಾಡಿಕೊಳ್ಳುತ್ತದೆ. ಆಹಾರ ತಿಂದು ಗುರಾಯಿಸುತ್ತದೆ. ನನಗೂ ಅದನ್ನು ಬಿಟ್ಟು ಇರಲು ಕಷ್ಟವೆನಿಸುತ್ತದೆ. ರಾಜ, ಮಗ ಎಂದು ಕರೆಯುತ್ತೇನೆ. ಏನನ್ನಾದರೂ ಹೇಳಿದಾಗ ಕಿವಿ ಅಲುಗಾಡಿಸಿದರೆ ಮಾತಿಗೆ ಸ್ಪಂದಿಸುತ್ತಿದೆ ಎಂದು ಅರ್ಥ’ ಎಂದು ಆನೆ ಜೊತೆಗಿನ ಒಡನಾಟವನ್ನು ಅವರು ತೆರೆದಿಡುತ್ತಾರೆ.

ಈತನಿಗೆತುಂಬಾ ಕೋಪ. ಆದರೆ, ಅಷ್ಟೇ ಭಾವುಕ ಜೀವಿ. ವ್ಯಕ್ತಿಯ ಮೇಲೆ ವಿಶ್ವಾಸ ಬಂದರೆ ಸುಮ್ಮನಿರುತ್ತದೆ.ಆ ಆನೆಗಳೇ ಹೀಗೆ... ತನ್ನನ್ನು ಸಾಕಿ ಸಲುವವರ ಮೇಲೆ ಒಮ್ಮೆ ವಿಶ್ವಾಸ ಮೂಡಿದರೆ ಮಗುವಿನಂತೆ ನೋಡಿಕೊಳ್ಳುತ್ತವೆ. ಅದೆಷ್ಟೇ ಕ್ರೂರವಾಗಿದ್ದರೂ ಸರಿ. ಅದೆಷ್ಟೇ ಮದವೇರಿದ್ದರೂ ಸರಿ! ಅದು ಒಮ್ಮೊಮ್ಮೆ ತಂದೆ ಮಕ್ಕಳ ಸಂಬಂಧದಂತೆ ಬೆಳೆದುಬಿಡುತ್ತದೆ.

‘ನಾನು 20 ವರ್ಷಗಳಿಂದ ಗಜಪಡೆ ಜೊತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಬಲರಾಮ ಹಾಗೂ ಅರ್ಜುನ ಅಂಬಾರಿ ಹೊತ್ತಿದ್ದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಎರಡೂ ಬಲಶಾಲಿ ಆನೆಗಳು. ಇದುವರೆಗೆ ಧಾರ್ಮಿಕ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿವೆ’ ಎಂದುಸ್ಮರಿಸುತ್ತಾರೆಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜ್‌.

ಆನೆಯೇಇವರ ಆಸ್ತಿ: ದೊಡ್ಡಮಾಸ್ತಿ ಎಂಬ ಮಾವುತ ಸುಮಾರು 18 ವರ್ಷ ಅರ್ಜುನನ ಒಡನಾಟದಲ್ಲಿದ್ದರು. ಅಂಬಾರಿ ಹೊತ್ತ ಈ ಆನೆಯನ್ನು ಜಂಬೂಸವಾರಿಯಲ್ಲಿ ನಾಲ್ಕು ಬಾರಿ ಮುನ್ನಡೆಸಿದ್ದರು. ಆದರೆ, ಬ್ರೇನ್‌ ಟ್ಯೂಮರ್‌ನಿಂದಾಗಿ 2016ರಲ್ಲಿ ತೀರಿ ಹೋದರು.

‘ನನ್ನ ಮೂವರು ಗಂಡುಮಕ್ಕಳಾದ ಮಹೇಶ್‌, ಬೋಳ, ಗಣೇಶನಿಗಿಂತ ಅರ್ಜುನ ಆನೆ ಮೇಲೆ ಬಹಳ ಪ್ರೀತಿ. ಅವನೇ ನನ್ನ ದೊಡ್ಡ ಮಗ. ಅವನೇ ನಮ್ಮ ಆಸ್ತಿ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.

ಅವರ ತಾತ ಲಚ್ಚಿಮ, ತಂದೆ ಮಾಸ್ತಿಸೆಲ್ವಂ ಮಾವುತರಾಗಿದ್ದರು. ಅವರದು ಆನೆ ನೋಡಿಕೊಳ್ಳುವ ವಂಶ. ಹೀಗಾಗಿ, ಅವರು ಶಾಲೆಗೂ ಹೋಗದೆ ಆನೆಗಳ ಜೊತೆ ಬೆಳೆದರು.

ಹೀಗಾಗಿ, ದೊಡ್ಡಮಾಸ್ತಿ ಅಗಲಿಕೆಯನ್ನು ತಡೆದುಕೊಳ್ಳಲು ಸಹಜವಾಗಿ ಅರ್ಜುನನಿಗೆ ಸಾಧ್ಯವಾಗಿರಲಿಲ್ಲ. ಬೇಸರದಿಂದ ಪದೇಪದೇ ಘೀಳಿಡುತಿತ್ತು. ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ತನ್ನ ಒಡೆಯ ಎಲ್ಲಿರಬಹುದೆಂದು ತಡಕಾಟದಲ್ಲಿ ತೊಡಗಿತ್ತು. ಬೇಸರವಾದಾಗ ಕಾಡಿನಲ್ಲಿ ದೊಡ್ಡಮಾಸ್ತಿ ಸಮಾಧಿಗೆ ನಮಿಸಿ ಬರುತಿತ್ತು. ಈಗಲೂ ಆ ಸಂಪ್ರದಾಯವನ್ನು ಅದು ಮುಂದುವರಿಸಿದೆಯಂತೆ.

ಅರ್ಜುನ ಆನೆ ಕುರಿತು...

ಅರ್ಜುನ ಆನೆಯುಸುಮಾರು ಆರು ಸಾವಿರಕೆ.ಜಿ ತೂಕವಿದೆ. ಹುಣಸೂರು ವನ್ಯಜೀವಿ ವಿಭಾಗದ ಬಳ್ಳೆ ಆನೆ ಶಿಬಿರದ ಈ ಆನೆಯನ್ನು ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ 1968ರಲ್ಲಿ ಖೆಡ್ಡಾಕ್ಕೆ ಕೆಡವಿ ಸೆರೆ ಹಿಡಿಯಲಾಯಿತು. ದ್ರೋಣ ಆನೆಯ ಅಕಾಲಿಕ ಸಾವಿನ ಬಳಿಕ ಒಮ್ಮೆ ಅಂಬಾರಿ ಹೊತ್ತಿತ್ತು. ಆದರೆ, ಮಾವುತನನ್ನು ಕೊಂದಿದ್ದರಿಂದ ಉತ್ಸವದಿಂದ ಹೊರಗಿಡಲಾಗಿತ್ತು. ಬಲರಾಮನಿಗೆ ವಯಸ್ಸಾದ ಕಾರಣ ಮತ್ತೆ ಅಂಬಾರಿ ಹೊರುವ ಜವಾಬ್ದಾರಿ ಲಭಿಸಿತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.