ADVERTISEMENT

ದೇವರಾಜ ಮಾರುಕಟ್ಟೆ; ಜಂಟಿ ಸಮೀಕ್ಷೆಗೆ ನಿರ್ಧಾರ

‘ಸೆಸ್ಕ್’ ಮತ್ತು ಪಾಲಿಕೆ ತಂಡಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 10:32 IST
Last Updated 16 ಆಗಸ್ಟ್ 2019, 10:32 IST
ಬೆಂಕಿ ಅನಾಹುತ ಸಂಭವಿಸಿದ ದೇವರಾಜ ಮಾರುಕಟ್ಟೆಗೆ ಶಾಸಕ ಎಲ್.ನಾಗೇಂದ್ರ ಹಾಗೂ ಮೇಯರ್ ಪುಷ್ಪಲತಾ ಜಗನ್ನಾಥ್ ಮಂಗಳವಾರ ಪರಿಶೀಲನೆ ನಡೆಸಿದರು
ಬೆಂಕಿ ಅನಾಹುತ ಸಂಭವಿಸಿದ ದೇವರಾಜ ಮಾರುಕಟ್ಟೆಗೆ ಶಾಸಕ ಎಲ್.ನಾಗೇಂದ್ರ ಹಾಗೂ ಮೇಯರ್ ಪುಷ್ಪಲತಾ ಜಗನ್ನಾಥ್ ಮಂಗಳವಾರ ಪರಿಶೀಲನೆ ನಡೆಸಿದರು   

ಮೈಸೂರು: ಇಲ್ಲಿನ ದೇವರಾಜ ಮಾರುಕಟ್ಟೆಯಲ್ಲಿ ವರ್ಷದಲ್ಲಿ 2 ಬಾರಿ ವಿದ್ಯುತ್ ಅವಘಢ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಪರಿಶೀಲನೆ ನಡೆಸಲು ಮುಂದಾಗಿದೆ.

ಪಾಲಿಕೆಯ ಪ್ರಭಾರ ಆಯುಕ್ತ ಕಾಂತರಾಜು ಈ ಸಂಬಂಧ ಕೂಲಕಂಷವಾಗಿ ಪರಿಶೀಲಿಸಿ ವರದಿ ನೀಡುವಂತೆ ವಿದ್ಯುತ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಾಗೇಶ್ ಅವರಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಂತರಾಜು, ‘ಸೆಸ್ಕ್ ಮತ್ತು ಪಾಲಿಕೆಯ ವಿದ್ಯುತ್ ವಿಭಾಗದ ತಂಡಗಳು ಜಂಟಿಯಾಗಿ ಸಮೀಕ್ಷೆ ನಡೆಸಲಿವೆ. ನಂತರ, ಅವರು ನೀಡುವ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.‌

ADVERTISEMENT

ದೇವರಾಜ ಮಾರುಕಟ್ಟೆಯಲ್ಲಿ ಇದೇ ವರ್ಷ ಫೆಬ್ರುವರಿಯಲ್ಲಿ ಹಾಗೂ ಸೋಮವಾರ ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಅಗ್ನಿ ದುರಂತಗಳು ಸಂಭವಿಸಿದ್ದವು. ಇದರಿಂದ ಒಟ್ಟು 8 ಅಂಗಡಿಗಳು ಭಸ್ಮವಾಗಿವೆ. ಇದು ಅಲ್ಲಿನ ವ್ಯಾಪಾರಸ್ಥರು ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಬೆಂಕಿಗೆ ಏನು ಕಾರಣ?

ಮೊದಲೇ ಶಿಥಿಲವಾಗಿರುವ ಮಾರುಕಟ್ಟೆಯಲ್ಲಿ ವಿದ್ಯುತ್ ವಿತರಣಾ ವೈಯರ್‌ಗಳು ಸಹ ತೀರಾ ಹಳೆಯದಾಗಿವೆ. ಇವುಗಳನ್ನು ಬದಲಿಸಬೇಕಾದ ಅನಿವಾರ್ಯತೆ ಇದೆ ಎಂದು ಕೆಲವು ವ್ಯಾಪಾಸ್ಥರು ಹೇಳುತ್ತಾರೆ.

ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯುತ್‌ನ್ನು ಬಳಕೆ ಮಾಡುವುದೂ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಶಿಥಿಲವಾಗಿರುವ ಗೋಡೆಗಳಲ್ಲಿ ಇಳಿಯುವ ಮಳೆ ನೀರೂ ಪ್ರಮುಖ ಕಾರಣ ಎನ್ನಲಾಗಿದೆ.

ನಿರ್ವಹಣಾ ಕೊರತೆಯಿಂದ ಸೊರಗಿರುವ ಮಾರುಕಟ್ಟೆಯ ಕಟ್ಟಡಕ್ಕೆ ಇನ್ನಾದರೂ ಪಾಲಿಕೆ ಸೂಕ್ತ ಯೋಜನೆ ರೂಪಿಸಿ ತಾತ್ಕಾಲಿಕವಾಗಿಯಾದರೂ, ದುರಂತ ನಡೆಯದ ಹಾಗೆ ದುರಸ್ತಿಗೊಳಿಸಬೇಕು. ಈ ಮೂಲಕ ಇಲ್ಲಿನ ವ್ಯಾಪಾರಿಗಳು ಮತ್ತು ಸಾರ್ವಜನಿಕರ ಪ್ರಾಣಗಳನ್ನು ರಕ್ಷಿಸಬೇಕು ಎಂದು ವ್ಯಾಪಾರಿ ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.