ADVERTISEMENT

ಎಚ್.ಡಿ.ಕೋಟೆ | ಕೈಕೊಟ್ಟ ಡಯಾಲಿಸಿಸ್‌ ಯಂತ್ರಗಳು

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಸತೀಶ್‌ ಬಿ
Published 27 ಜೂನ್ 2020, 5:00 IST
Last Updated 27 ಜೂನ್ 2020, 5:00 IST
ಡಯಾಲಿಸಿಸ್‌–ಸಾಂದರ್ಭಿಕ ಚಿತ್ರ
ಡಯಾಲಿಸಿಸ್‌–ಸಾಂದರ್ಭಿಕ ಚಿತ್ರ   

ಎಚ್.ಡಿ.ಕೋಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಎರಡು ಡಯಾಲಿಸಿಸ್‌ ಯಂತ್ರಗಳು ಕೆಟ್ಟು ಒಂದು ತಿಂಗಳಾಗಿದ್ದು, ತಾಲ್ಲೂಕಿನ ರೋಗಿಗಳು ಪರದಾಡುವಂತಾಗಿದೆ.

ಆಸ್ಪತ್ರೆಯಲ್ಲಿನ ಡಯಾಲಿಸಿಸ್‌ ಯಂತ್ರಗಳು ಕೆಟ್ಟು ಒಂದು ತಿಂಗಳಾದರೂ ಇನ್ನೂ ಸರಿಪಡಿಸಿಲ್ಲ. ಇದರಿಂದಾಗಿ ರೋಗಿಗಳು ಅವರ ಸ್ವಂತ ಖರ್ಚಿನಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡು ತಾಲ್ಲೂಕುಗಳ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಅನಿವಾರ್ಯ ಸೃಷ್ಟಿಯಾಗಿದೆ.

‘ಹೆಚ್ಚು ದೂರ ಸಂಚರಿಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಕೆಲವರು ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಬಾರಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ, ಆದರೂ ಇನ್ನೂ ಸರಿಯಾಗಿಲ್ಲ’ ಎಂದು ಸಿದ್ದರಾಮ ಅಳಲು ತೋಡಿಕೊಂಡರು.

ADVERTISEMENT

‘12 ಮಂದಿ ಕಿಡ್ನಿ ವೈಫಲ್ಯದ ರೋಗಿಗಳಿದ್ದು, ಮೂರು ದಿನಕ್ಕೆ ಒಮ್ಮೆ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕಿದೆ. ಖಾಸಗಿ ಕಂಪನಿ ನಿರ್ವಹಣೆ ನೋಡಿಕೊಳ್ಳುತ್ತಿದ್ದು, ವಿದ್ಯುತ್‌ ಮತ್ತು ಜನರೇಟರ್‌ ಅನ್ನು ಆಸ್ಪತ್ರೆಯಿಂದಲೇ ಉಪಯೋಗಿಸಿಕೊಳ್ಳುತ್ತಿದ್ದಾರೆ. ದುರಸ್ತಿಗೆ ಮಾತ್ರ ಕ್ರಮ ಕೈಗೊಂಡಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಸಿಬ್ಬಂದಿ
ತಿಳಿಸಿದರು.

‘ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು, ಅಲ್ಲಿಗೆ ಹೋಗಲು ಭಯವಾಗುತ್ತಿದೆ. ಬೇರೆಡೆ ಹೋಗಿ ಡಯಾಲಿಸಿಸ್‌ ಮಾಡಿಸಲು ಕನಿಷ್ಟ ₹ 2 ಸಾವಿರ ಬೇಕಾಗುತ್ತದೆ. ಕಷ್ಟದ ಕಾಲದಲ್ಲಿ ಜನರಿಗೆ ತೊಂದರೆ ಆಗದಂತೆ ಶೀಘ್ರ ಯಂತ್ರಗಳನ್ನು ದುರಸ್ತಿಪಡಿಸಿ ಅನುಕೂಲ ಮಾಡಿಕೊಡಬೇಕು’ ಎಂದು ರೋಗಿ ಮಹೇಶ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.