ADVERTISEMENT

ವಿಧಾನಸಭೆ ವಿಸರ್ಜಿಸಿ: ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 9:07 IST
Last Updated 18 ಜೂನ್ 2021, 9:07 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌   

ಮೈಸೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ನಾಯಕರೇ ಗಂಭೀರ ಆಪಾದನೆ ಮಾಡಿದ್ದಾರೆ. ಇದರಲ್ಲಿ ಕೇಂದ್ರದ ಪಾಲು ಇದೆಯಾ? ಮೊದಲು ವಿಧಾನಸಭೆಯನ್ನು ವಿಸರ್ಜಿಸಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಶುಕ್ರವಾರ ಇಲ್ಲಿ ಆಗ್ರಹಿಸಿದರು.

‘ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲಾತಿ ಸಂಗ್ರಹಿಸಿ, ಕೆಪಿಸಿಸಿಯಿಂದ ಅನುಮತಿ ಪಡೆದು ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಹಾಗೂ ಹೈಕೋರ್ಟ್‌ನಲ್ಲೂ ಪ್ರಕರಣ ದಾಖಲಿಸುತ್ತೇವೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಶಾಸಕ ಅರವಿಂದ ಬೆಲ್ಲದ ಫೋನ್‌ ಕದ್ದಾಲಿಕೆಯ ಬಗ್ಗೆ ದೂರು ನೀಡಿದರೂ, ಶಿಸ್ತಿನ ಪಕ್ಷದ ಹೈಕಮಾಂಡ್‌ ಏನು ಮಾಡುತ್ತಿದೆ?’ ಎಂದು ಕೆಪಿಸಿಸಿ ವಕ್ತಾರರು ಲೇವಡಿ ಮಾಡಿದರು.

ADVERTISEMENT

ಆಯುಕ್ತರಿಂದಲೇ ವಸೂಲಿ ಮಾಡಿ: ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂಬರ್‌ ನಾಲ್ಕರ ಭೂ ತಕರಾರಿಗೆ ಸಂಬಂಧಿಸಿದಂತೆ, ತಮ್ಮ ಮೇಲಿದ್ದ ನ್ಯಾಯಾಂಗ ನಿಂದನೆ ತಪ್ಪಿಸಿಕೊಳ್ಳಲಿಕ್ಕಾಗಿ ಸುಪ್ರೀಂಕೋರ್ಟ್‌ಗೆ ಎಸ್‌ಎಲ್‌ಪಿ ಹಾಕಿದ್ದಾರೆ.

ಜಿಲ್ಲಾಡಳಿತದ ಪರ ವಾದಿಸಲು ವಕೀಲ ಹರೀಶ್‌ ಸಾಳ್ವೆ ಅವರನ್ನು ನೇಮಿಸಿಕೊಂಡಿದ್ದರು. ವಕೀಲರ ಶುಲ್ಕವನ್ನು ಮುಡಾದಿಂದ ಕೊಡಿಸಿದ್ದಾರೆ. ಇದರಲ್ಲಿ ಮುಡಾ ವಿರುದ್ಧವೇ ಪ್ರಕರಣವಿದೆ. ತನ್ನ ವಿರುದ್ಧ ವಾದಿಸಲು ವಕೀಲರಿಗೆ ಇದೀಗ ಮುಡಾ ಶುಲ್ಕ ನೀಡಿದ ಪ್ರಮಾದ ಎಸಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾವತಿಸಿರುವ ದುಬಾರಿ ಶುಲ್ಕವನ್ನು ಪ್ರಾಧಿಕಾರದ ಆಯುಕ್ತರಿಂದಲೇ ವಸೂಲಿ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.