ಉಗ್ರ ನರಸಿಂಹೇಗೌಡ
ಮೈಸೂರು: ‘ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರದಾರನ ಹೇಳಿಕೆಯಂತೆ ನಡೆದಿದೆ ಎನ್ನಲಾದ ಕೊಲೆಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ವಿರುದ್ಧವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಕರ್ತವ್ಯಲೋಪ ಎಸಗುತ್ತಿದ್ದಾರೆ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಉಗ್ರನರಸಿಂಹೇಗೌಡ ದೂರಿದ್ದಾರೆ.
‘ಎಸ್ಐಟಿ ರಚಿಸುವವರೆಗೂ ಸುಮ್ಮನಿದ್ದ ಬಿಜೆಪಿ, ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳು ಸಿಕ್ಕ ಬಳಿಕ ತಮ್ಮ ಪಕ್ಷದ ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಬೆಂಬಲಕ್ಕೆ ನಿಂತಿದೆ. ಅವರಿಗೆ ಡಿ.ಕೆ.ಶಿವಕುಮಾರ್ ಪ್ರೋತ್ಸಾಹ ನೀಡುತ್ತಿದ್ದು, ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಎನ್ನುವ ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಧೋರಣೆ ಮೂಲಕ ತನಿಖೆಯಿಂದ ಸತ್ಯ ಬಯಸುತ್ತಿರುವ ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
‘ಈ ಇಬ್ಬರೂ ಷಡ್ಯಂತ್ರದ ಹಿಂದಿನ ಕಾರಣಗಳನ್ನು ಹೇಳದೆ ಸದನ ಮತ್ತು ರಾಜ್ಯದ ಜನರಿಗೆ ದ್ರೋಹ ಎಸಗುತ್ತಿದ್ದಾರೆ. ಇನ್ನೊಂದು ಕಡೆ ಧರ್ಮಸ್ಥಳ ಕುರಿತ ಚರ್ಚೆಯನ್ನೇ ಅಪರಾಧ ಎನ್ನುವ ಮೂಲಕ ಭಯ ಸೃಷ್ಟಿಸಲು ಹೊರಟಿದ್ದಾರೆ. ರಾಜ್ಯ ಮತ್ತು ದೇಶದ ಎಲ್ಲಾ ನಾಗರಿಕರು ಈ ನಡೆಯನ್ನು ಗಟ್ಟಿಯಾಗಿ ಪ್ರಶ್ನಿಸಬೇಕಿದೆ’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.