ADVERTISEMENT

ದೊಡ್ಡಾಲತ್ತೂರು ಪ್ರಾಚ್ಯವಸ್ತು ಪ್ರದರ್ಶನ

ಮಾನಸಗಂಗೋತ್ರಿಯ ಪ್ರಾಚೀನ ಇತಿಹಾಸ, ಪುರಾತತ್ವ ಅಧ್ಯಯನ ವಿಭಾಗದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:13 IST
Last Updated 25 ನವೆಂಬರ್ 2025, 3:13 IST
ಮೈಸೂರು ವಿಶ್ವವಿದ್ಯಾಲಯದ ಪುರಾತತ್ವ ಅಧ್ಯಯನ ವಿಭಾಗದಲ್ಲಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಸೋಮವಾರ ಚಾಲನೆಗೊಂಡ ದೊಡ್ಡಾಲತ್ತೂರು ಪ್ರಾಚ್ಯವಸ್ತುಗಳ ಪ್ರದರ್ಶನದಲ್ಲಿ ವಿ.ನಾಗರಾಜ್, ಆರ್.ಎಸ್. ಕುಮಾರನ್, ಪ್ರೊ.ಎನ್.ಕೆ.ಲೋಕನಾಥ್ ಅವರಿಗೆ ವಿಭಾಗದ ನಿರ್ದೇಶಕಿ ಪ್ರೊ.ವಿ.ಶೋಭಾ ಮಾಹಿತಿ ನೀಡಿದರು – ಪ್ರಜಾವಾಣಿ ಚಿತ್ರ
ಮೈಸೂರು ವಿಶ್ವವಿದ್ಯಾಲಯದ ಪುರಾತತ್ವ ಅಧ್ಯಯನ ವಿಭಾಗದಲ್ಲಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಸೋಮವಾರ ಚಾಲನೆಗೊಂಡ ದೊಡ್ಡಾಲತ್ತೂರು ಪ್ರಾಚ್ಯವಸ್ತುಗಳ ಪ್ರದರ್ಶನದಲ್ಲಿ ವಿ.ನಾಗರಾಜ್, ಆರ್.ಎಸ್. ಕುಮಾರನ್, ಪ್ರೊ.ಎನ್.ಕೆ.ಲೋಕನಾಥ್ ಅವರಿಗೆ ವಿಭಾಗದ ನಿರ್ದೇಶಕಿ ಪ್ರೊ.ವಿ.ಶೋಭಾ ಮಾಹಿತಿ ನೀಡಿದರು – ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಮಾನಸಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಆವರಣದಲ್ಲಿ ಸೋಮವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ದೊರೆತ ಬೃಹತ್‌ ಶಿಲಾಯುಗದ ಪ್ರಾಚ್ಯವಸ್ತುಗಳ ಪ್ರದರ್ಶನವು ಗಮನ ಸೆಳೆಯಿತು.

ವಿಭಾಗ ಹಾಗೂ ಮಿಥಿಕ್‌ ಸೊಸೈಟಿಯಿಂದ 2024– 25ರಲ್ಲಿ ನಡೆದ ಉತ್ಖನನದಲ್ಲಿ ದೊರೆತ ಸುಮಾರು 50 ವಸ್ತುಗಳನ್ನು ವಿಶ್ವ ಪರಂಪರೆ ಸಪ್ತಾಹ ಪ್ರಯುಕ್ತ 5 ದಿನಗಳ ಪ್ರದರ್ಶನಕ್ಕೆ ಇರಿಸಲಾಗಿದೆ. ಅಂತ್ಯಕ್ರಿಯೆಗೆ ಬಳಸುತ್ತಿದ್ದ ಮಣ್ಣಿನ ಮಡಿಕೆಗಳು, ವೃತ್ತಾಕಾರದ ಕಬ್ಬಿಣದ ಗುರಾಣಿ, ಕತ್ತಿ, ಕೊಡಲಿ, ಬಾಣಗಳ ತಲೆ, ಶೂಲವಿರುವ ಆಯುಧವನ್ನು ಕಾಣಬಹುದು. ಇದಲ್ಲದೇ ಬೇರೆ ಸ್ಥಳಗಳಲ್ಲಿ ಸಂಗ್ರಹಿಸಿದ ಸಮಾಧಿಗೆ ಬಳಸುವ ತೊಟ್ಟಿ, ವೀರಗಲ್ಲುಗಳ ವೀಕ್ಷಣೆಗೂ ಅವಕಾಶ ಮಾಡಲಾಗಿದೆ.

ಪ್ರದರ್ಶನಕ್ಕೆ ಚಾಲನೆ ನೀಡಿದ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಉತ್ಖನನ ಶಾಖೆ ಅಧೀಕ್ಷಕ ಆರ್.ಎನ್.ಕುಮಾರನ್, ‘ಮಾನವ ಚರಿತ್ರೆ ಅರಿಯಲು ಉತ್ಖನನ ಪ್ರಕ್ರಿಯೆ ಅತ್ಯಂತ ಅಗತ್ಯ. ಜನ ಜೀವನದ ವಾಸ್ತವ ಮಾಹಿತಿ ಲಭ್ಯವಾಗಲು ಶಾಸನ ಮತ್ತು ಸಾಹಿತ್ಯ ಜ್ಞಾನವೂ ಜತೆಯಲ್ಲಿ ಸಾಗಬೇಕು.

ADVERTISEMENT

‘ಬಾದಾಮಿ, ಐಹೊಳೆ ಮುಂತಾದ ವಿಶ್ವ ಪಾರಂಪರಿಕ ಸ್ಥಳಗಳು ಮಾತ್ರವಲ್ಲದೇ ಅನೇಕ ಸ್ಥಳೀಯ ಸ್ಥಳಗಳೂ ಐತಿಹಾಸಿಕ ಮಹತ್ವ ಹೊಂದಿವೆ. ಅವುಗಳ ಅರಿತು ಸಂಶೋಧಿಸುವ ಅಗತ್ಯವಿದೆ. ಆಧುನಿಕ ಜಿಪಿಎಸ್‌, ಸರ್ವೆ, ಸ್ಥಳೀಯ ಜನರ ಮಾಹಿತಿಗಳು ಉತ್ಖನನ ಜಾಗ ಆಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತವೆ’ ಎಂದರು.

ದೊಡ್ಡಾಲತ್ತೂರು ಪ್ರಾಚ್ಯವಸ್ತುಗಳಲ್ಲಿ ತ್ರಿಶೂಲ, ಗುರಾಣಿಗಳು ದೊರೆತಿರುವುದು ಬಹಳ ಅಪರೂಪದ ಶೋಧನೆಯಾಗಿದೆ. ದೊಡ್ಡ ಮಡಿಕೆಗಳಲ್ಲಿ ಶವ ಅಥವಾ ಅಸ್ಥಿಯನ್ನು ತುಂಬಿಸಿಡುವ ಪ್ರಕ್ತಿಯೆಯೂ ಭಿನ್ನ. ಇಂಥ ಉತ್ಖನನಗಳು ಚರಿತ್ರೆಕಾರರಿಗೆ ಹೊಸ ಹೊಳವು ನೀಡುತ್ತದೆ. ಜ್ಞಾನ ವಿಸ್ತರಿಸುತ್ತದೆ’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ‘ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಕ್ಕೆ ಆಸಕ್ತಿ ಹಾಗೂ ಕುತೂಹಲ ಬಹುಮುಖ್ಯ. ಹಿಂದಿನ ಸಮಾಜ ಹೇಗಿತ್ತು, ಮುಂದೆ ಹೇಗಿರಬೇಕು ಎಂಬುದನ್ನು ಅರಿಯಲು ಪ್ರಾಚೀನ ಇತಿಹಾಸ ಅಗತ್ಯ. ₹32 ಕೋಟಿ ವೆಚ್ಚದಲ್ಲಿ ಜಾನಪದ ಅಧ್ಯಯನ ವಿಭಾಗದ ವಸ್ತುಗಳ ಸಂಗ್ರಹ, ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯೂ ಉತ್ಖನನದಿಂದ ದೊರೆತ ವಸ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆಯಾಗಬೇಕಿದೆ. ಆಸಕ್ತರು ಸಹಕರಿಸಬೇಕು’ ಎಂದರು.

ವಿಭಾಗದ ನಿರ್ದೇಶಕಿ ಪ್ರೊ.ವಿ.ಶೋಭಾ, ಮಿಥಿಕ್ ಸೊಸೈಟಿ ಕಾರ್ಯದರ್ಶಿ ಎಸ್.ರವಿ ಹಾಜರಿದ್ದರು.

‘ದೇಶದ ಸಮಗ್ರತೆಗೆ ಪೂರಕ’

ಮಿಥಿಕ್ ಸೊಸೈಟಿ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ ‘ಉತ್ಖನನಗಳು ಪ್ರಾಚ್ಯವಸ್ತುಗಳ ಅಧ್ಯಯನವು ದೇಶದ ಸಮಗ್ರತೆಗೂ ಅಗತ್ಯ ಮಾಹಿತಿ ಕಲ್ಪಿಸುತ್ತವೆ. ಲಿಪಿಗಳ ಕುರಿತ ಅಧ್ಯಯನವು ಎಲ್ಲದರ ಮೂಲ ಬ್ರಾಹ್ಮಿ ಲಿಪಿ ಎಂಬುದನ್ನು ತಿಳಿಸಿ ಐಕ್ಯತೆ ಮೂಡಿಸಿದೆ’ ಎಂದರು. ‘ಪ್ರಪಂಚದಲ್ಲಿಯೇ ನಮ್ಮದು ಅತ್ಯಂತ ಪುರಾತನ ಸಂಸ್ಕೃತಿ ಮತ್ತು ಪರಂಪರೆ ಇದು ನಿರಂತರತೆಯನ್ನೂ ಹೊಂದಿದೆ ಅಗಾಧವಾಗಿದೆ. ಅಧ್ಯಯನಕ್ಕೆ ಅನೇಕ ಅವಕಾಶವಿದೆ’ ಎಂದರು.